ಚಕ್ರಗಳು ದೇಹದಾದ್ಯಂತ ಹರಡಿರುವ ಶಕ್ತಿ ಕೇಂದ್ರಗಳು. ಚಕ್ರ ಎನ್ನುವುದು ಸಂಸ್ಕೃತ ಶಬ್ದ. ಇದರ ಅರ್ಥ ಗಾಲಿ. ಶಕ್ತಿಯ ನೂಲು ತೆಗೆಯುವ ರಾಟೆ ಎಂದು ಇದನ್ನು ಅಂದುಕೊಳ್ಳಬಹುದು. ಪ್ರತಿ ಮನುಷ್ಯಜೀವಿಗೂ ಚಾಲಕ ಶಕ್ತಿಯಾಗಿರುವ ಚೈತನ್ಯದ ಸೆಲೆ ಇದಾಗಿದೆ. ದೇಹದ ವಿವಿಧ ಕಡೆ ದೊಡ್ಡ ಹಾಗೂ ಸಣ್ಣ ಶಕ್ತಿ ಕೇಂದ್ರಗಳು ಇವೆ. ಇವು ಬದುಕಿನ ವಿವಿಧ ಮಾನಸಿಕ, ಭಾವನಾತ್ಮಕ ಹಾಗೂ ಅಧ್ಯಾತ್ಮಿಕ ಅಂಶಗಳನ್ನು ನಿರೂಪಿಸುತ್ತವೆ. ಭೌತಿಕ ಶರೀರ ಹಾಗೂ ಆಧ್ಯಾತ್ಮಕ ಶರೀರದ ನಡುವಿನ ಕೊಂಡಿ ಎಂತಲೂ ಚಕ್ರಗಳನ್ನು ಕರೆಯಲಾಗುತ್ತದೆ. ಶಕ್ತಿಯ ಹರಿಯುವಿಕೆಗೆ ತಡೆಯಾದರೆ ಇದು ಮಾನಸಿಕ ಹಾಗೂ ಭಾವನಾತ್ಮಕ ಬೇಗುದಿಗೆ ಕಾರಣವಾಗುತ್ತದೆ.
ದೇಹದ ಆಂತರಿಕ ಶಕ್ತಿಯು ನಮ್ಮ ಸುತ್ತಲಿನ ವಾತಾವರಣದ ಶಕ್ತಿಗಳೊಂದಿಗೆ ಮಿಳಿತವಾದಾಗ ಸಂಚಯನಗೊಳ್ಳುವ ಅಗೋಚರ ಸೂಕ್ಷ್ಮ ಶಕ್ತಿ ಕೇಂದ್ರಗಳೇ ಚಕ್ರಗಳು. ಈ ತತ್ವಗಳ ಆಧಾರದಲ್ಲಿಯೇ ವಾಸ್ತು ಶಾಸ್ತ್ರದ ತತ್ವ ನಿಂತಿದೆ. ಇದು ನಮ್ಮ ಸುತ್ತ ಇರುವ ಸಕಾರಾತ್ಮಕ ಶಕ್ತಿಗಳನ್ನು ಬಲಪಡಿಸಿ ನಮ್ಮೊಳಗೆ ಸಕಾರಾತ್ಮಕತೆ ತುಂಬುತ್ತದೆ. ಇದು ಆರೋಗ್ಯ, ಐಶ್ವರ್ಯ, ಅಧ್ಯಾತ್ಮ ಹಾಗೂ ಸಂಪೂರ್ಣ ಇರುವಿಕೆಯ ಮೇಲೆ ದೀರ್ಘಾವಧಿ ಪ್ರಯೋಜನ ನೀಡುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಸುತ್ತಲಿನ ವಾತಾವರಣವನ್ನು ಸರಿಹೊಂದಿಸುವ ಹಾಗೂ ಜನರ ಸುತ್ತ ಇರುವ ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುವ ನೈಪುಣ್ಯವನ್ನು ಸರಳ ವಾಸ್ತು ಹೊಂದಿದೆ. ನಿಮ್ಮ ಮನೆಗೆ ಸರಿಯಾದ ವಿನ್ಯಾಸ, ನಿರ್ದಿಷ್ಟ ಕೊಠಡಿಗಳಿಗೆ ಬಳಿಯುವ ಬಣ್ಣಗಳು ಯಾವ ರೀತಿ ಇರಬೇಕು, ಪ್ರತಿಯೊಂದು ಕೊಠಡಿಗಳಿಗೆ ಯಾವ ರೀತಿಯಲ್ಲಿ ಸೂಕ್ತ ಅಲಂಕಾರ ಮಾಡಬೇಕು-ಇತ್ಯಾದಿ ಅಂಶಗಳನ್ನು ಗುರುತಿಸುವುದಕ್ಕೆ ಸರಳ ವಾಸ್ತು ನಿಮಗೆ ನೆರವು ನೀಡುತ್ತದೆ. ಈ ಎಲ್ಲ ಅಂಶಗಳು ಸೇರಿಕೊಂಡು ದೇಹದ ಚಕ್ರಗಳನ್ನು ಚೈತನ್ಯಗೊಳಿಸುತ್ತವೆ. ಇದರ ಪರಿಣಾಮವಾಗಿ ಕುಟುಂಬದಲ್ಲಿ ಸಕಾರಾತ್ಮಕತೆ ಹಾಗೂ ಶಾಂತಿ ಮೂಡುತ್ತದೆ.
ಸಂಪೂರ್ಣ ನೆಮ್ಮದಿ ಹಾಗೂ ಸಂತೋಷಕ್ಕೆ ಈ ಏಳು ಚಕ್ರಗಳ ಸಮತೋಲನ ಕಾಪಾಡಲು ಸರಳ ವಾಸ್ತು ಬಳಕೆ ಮಾಡಿರುವ ಅನೇಕ ವಿಧಾನಗಳು ಇವೆ. ಇವುಗಳಲ್ಲಿ ಕೆಲವನ್ನು ಈ ಕೆಳಗೆ ಕೊಡಲಾಗಿದೆ.
- ಮೂಲಾಧಾರ ಚಕ್ರ ಅಥವಾ ಆಧಾರ ಚಕ್ರ:
ಈ ಚಕ್ರವು ಬೆನ್ನುಮೂಳೆಯ ತಳದಲ್ಲಿ, ಭೂಮಿಗೆ ಹತ್ತಿರವಾಗಿ ಇದೆ. ಮನೆಯಲ್ಲಿ ಭೂ ಶಕ್ತಿ ಹರಿಯುವಿಕೆಯನ್ನು ಹೆಚ್ಚಿಸಲು ಸರಳ ವಾಸ್ತು ನೀಡುವ ಸಲಹೆಯು ಈ ಚಕ್ರಕ್ಕೆ ಪರಿಣಾಮಕಾರಿಯಾಗಿದೆ. ಇದು ಸ್ಥಿರತೆ ಹಾಗೂ ಅಸ್ತಿತ್ವಕ್ಕೆ ಸಂಬಂಧಿಸಿದ್ದಾಗಿದೆ.
- ಸ್ವಾಧಿಷ್ಟಾನ ಚಕ್ರ ಅಥವಾ ತ್ರಿಕಾಸ್ಥಿ ಚಕ್ರ:
ಇದು ಬೆನ್ನುಮೂಳೆಯ ತಳ ಹಾಗೂ ನಾಭಿಯ ಮಧ್ಯೆ ಇದೆ. ಜಲ ತತ್ವ ಇದಕ್ಕೆ ಅಧಿಪತಿ. ಯಾವುದೇ ವಾಸಸ್ಥಾನದಲ್ಲಿರುವ ಜಲ ತತ್ವದ ಸಂಪೂರ್ಣ ಸಾಮರ್ಥ್ಯವನ್ನು ವಾಸ್ತು ಶಾಸ್ತ್ರವು ಹೊರತೆಗೆಯಬಲ್ಲದು. ಮನೆಯಲ್ಲಿ ಜಲತತ್ವ ಇಡುವ ನಿಖರ ಸ್ಥಳವನ್ನು ಸರಳ ವಾಸ್ತು ನಿಖರವಾಗಿ ಗುರುತಿಸುತ್ತದೆ. ಈ ತತ್ವವು ಸಂಪತ್ತಿನ ಸೃಷ್ಟಿಯ ಆಯ್ಕೆಯನ್ನು ತೆರೆಯುತ್ತದೆ ಮತ್ತು ಸಾರ್ವತ್ರಿಕ ನೆಮ್ಮದಿ ಹಾಗೂ ಶಾಂತಿಯನ್ನು ಕಾಪಾಡುತ್ತದೆ.
- ಮಣಿಪುರ ಚಕ್ರ ಅಥವಾ ನಾಭಿ ಚಕ್ರ:
ಇದು ನಾಭಿಯಲ್ಲಿ ಇದೆ. ಇದು ವ್ಯಕ್ತಿಯ ಆತ್ಮವಿಶ್ವಾಸವನ್ನು ನಿಯಂತ್ರಿಸುತ್ತದೆ. ಅಗ್ನಿ ತತ್ವ ಇದರ ಅಧಿಪತಿ. ವಾಸ್ತುವಿನಲ್ಲಿ ಅಗ್ನಿ ತತ್ವವನ್ನು ಬಹುತೇಕವಾಗಿ ಅಡುಗೆಮನೆಯ ವಿನ್ಯಾಸದ ಮೇಲೆ ನಿರೂಪಿಸಲಾಗುತ್ತದೆ. ವಾಸ್ತುವಿಗೆ ಅನುಗುಣವಾದ ಅಡುಗೆ ಮನೆ ವಿನ್ಯಾಸಕ್ಕೆ ಸರಳ ವಾಸ್ತು ನೆರವು ನೀಡುತ್ತದೆ.
- ಅನಾಹತ ಚಕ್ರ ಅಥವಾ ಹೃದಯ ಚಕ್ರ:
ಇದು ಸಹಾನುಭೂತಿ, ಮಮತೆ, ನಂಬಿಕೆ, ಔದಾರ್ಯ ಹಾಗೂ ಹೃದಯದಿಂದ ನಿರ್ಣಯಿಸುವ ಅಂಶಗಳಿಗೆ ಸಂಬಂಧಿಸಿದ ಚಕ್ರ. ಇದು ಎದೆಯ ಮಧ್ಯೆ ಇದೆ. ವಾಯುತತ್ವಕ್ಕೆ ಪುಷ್ಟಿ ನೀಡುವ ವಾಸ್ತುಶಾಸ್ತ್ರದ ಪ್ರಕಾರ ವಿನ್ಯಾಸಗೊಂಡ ಮನೆಯಲ್ಲಿ ಸದಸ್ಯರು ಅಭಿವೃದ್ಧಿ, ಉತ್ಸಾಹ ಹಾಗೂ ಆನಂದವನ್ನು ಅನುಭವಿಸುತ್ತಾರೆ.
- ವಿಶುದ್ಧ ಚಕ್ರ ಅಥವಾ ಗಂಟಲ ಚಕ್ರ:
ಇದು ಗಂಟಲ ಕುಣಿಕೆಯಲ್ಲಿ ಇದೆ. ಇದು ನಮ್ಮ ಸಂವಹನ ಹಾಗೂ ಸ್ವ ಅಭಿವ್ಯಕ್ತಿಯನ್ನು ನಿಯಂತ್ರಿಸುತ್ತದೆ. ವ್ಯಕ್ತಿಯ ಆತ್ಮವಿಶ್ವಾಸ ಹಾಗೂ ಆತ್ಮಗೌರವ ಹೆಚ್ಚಿಸುವುದಕ್ಕೆ ಸಂಬಂಧಿಸಿದ ವಾಸ್ತು ಶಾಸ್ತ್ರವು ಈ ಚಕ್ರವನ್ನು ಚೈತನ್ಯಗೊಳಿಸುತ್ತದೆ.
- ಆಜ್ಞಾ ಚಕ್ರ ಅಥವಾ ಮೂರನೆ ಕಣ್ಣಿನ ಚಕ್ರ:
ಇದು ಹುಬ್ಬಿನ ಮಧ್ಯದಲ್ಲಿ ಇದೆ. ಇದು ಆಲೋಚನೆ ಹಾಗೂ ಕಲ್ಪನೆಯನ್ನು ನಿಯಂತ್ರಿಸುತ್ತದೆ. ಆಲೋಚನೆಯಲ್ಲಿ ಸ್ಪಷ್ಟತೆ, ಅವಕಾಶ ಹಾಗೂ ದೂರದೃಷ್ಟಿಯನ್ನು ತೆರೆಸುವ ಜಲ ತತ್ವದಿಂದ ಈ ಚಕ್ರವು ನಿಯಂತ್ರಿಸಲ್ಪಡುತ್ತದೆ.
- ಸಹಸ್ರಾರ ಚಕ್ರ ಅಥವಾ ಮುಕುಟ ಚಕ್ರ:
ಇದು ಶಿರದ ತುತ್ತ ತುದಿಯಲ್ಲಿ ಇದೆ. ಇದು ನಿಮ್ಮನ್ನು ವಿಶ್ವ ಪ್ರಜ್ಞೆಯ ಜತೆ ಬೆಸೆಯುತ್ತದೆ. ಸಹಸ್ರಾರ ಚಕ್ರವನ್ನು ಸ್ಥಿರವಾಗಿಡುವುದಕ್ಕಾಗಿ ಮನೆಯಲ್ಲಿನ ಆಕಾಶ ತತ್ವವನ್ನು ಸರಳವಾಸ್ತು ಉತ್ತಮವಾಗಿಸುತ್ತದೆ.









Nice one