ಡಾ. ಚಂದ್ರಶೇಖರ ಗುರೂಜಿ
ಸಂಸ್ಥಾಪಕ, ಮಾರ್ಗದರ್ಶಕ, ಲಕ್ಷಗಟ್ಟಲೆ ಜನರಿಗೆ ಸಲಹೆಗಾರರು
“ಕನಸೆನ್ನುವುದು ನೀವು ನಿದ್ರೆಯಲ್ಲಿದ್ದಾಗ ನೋಡುವುದಲ್ಲ, ಇದು ನಿಮಗೆ ನಿದ್ರಿಸಲು ಬಿಡದೇ ಇರುವ ವಿಷಯ”. –ಡಾ.ಎ.ಪಿ.ಜೆ.ಅಬ್ದುಲ್ ಕಲಾಂ

ನಾವಿಲ್ಲಿ ಸರಳ ವಾಸ್ತುವಿನ ಸಂಶೋಧಕರಾಗಿರುವ ಹಾಗೂ ಮುಖ್ಯ ಶಕ್ತಿಯಾಗಿರುವ ಡಾ.ಚಂದ್ರಶೇಖರ ಅಂಗಡಿ (ಗುರೂಜಿ) ಅವರನ್ನು ಉಲ್ಲೇಖಿಸುವುದು ಅತ್ಯಂತ ಸೂಕ್ತವಾಗಿದೆ.

ಚಿಕ್ಕಂದಿನಿಂದಲೂ ಗುರೂಜಿಯವರು ಮಾನವ ಕುಲವು ಎದುರಿಸುತ್ತಿರುವ ಸವಾಲುಗಳು ಮತ್ತು ಕಷ್ಟಗಳನ್ನು ಗಮನಿಸುತ್ತಿದ್ದರು. 8 ವರ್ಷದ ಮಗುವಾಗಿರುವಾಗಲೇ ಅವರು ಭಾರತದಲ್ಲಿನ ಹಳೆಯ ದೇವಾಲಯವೊಂದನ್ನು ಜೀರ್ಣೋದ್ಧಾರ ಮಾಡುವುದಕ್ಕಾಗಿ ಜನರಿಂದ ದೇಣಿಗೆಯನ್ನು ಸಂಗ್ರಹಿಸುವ ನಿಸ್ವಾರ್ಥ ಕಾರ್ಯವೊಂದರಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದರು. ಅವರು ತಮ್ಮ ಊರಿನಲ್ಲಿಯೇ ಧನಾತ್ಮಕ ಊರ್ಜಾಶಕ್ತಿಯ ಕೇಂದ್ರವಾಗಿದ್ದ ದೇವಾಲಯವನ್ನು ಪುನಃ ಪೂರ್ವ ಸ್ಥಿತಿಗೆ ತರುವ ಮೂಲಕ ಜನರ ಬದುಕಿನಲ್ಲಿ ಮತ್ತೆ ಸಂತೋಷವನ್ನು ತರುವ ಆಶಯವನ್ನು ಹೊಂದಿದ್ದರು.

14ನೇ ವರ್ಷದಲ್ಲಿದ್ದಾಗ ಮತ್ತೊಮ್ಮೆ ತಾನು ಹೇಗೆ ತನ್ನ ಜೀವನವನ್ನು ಸಾರ್ಥಕಗೊಳಿಸಿ ಕೊಳ್ಳಬೇಕು ಎನ್ನುವ ಆಲೋಚನೆಗಳು ” ಡಾ. ಚಂದ್ರಶೇಖರ ಗುರೂಜಿ ” ಯವರ ಮನಸ್ಸಿನಲ್ಲಿ ಬರಲಾರಂಭಿಸಿದವು. ಇದಕ್ಕಾಗಿ ಅವರು ಸೈನ್ಯದಲ್ಲಿ ಸೇರಲು ನಿರ್ಧರಿಸಿದರು. ಅವರು ಪ್ರಯತ್ನಿಸಿದರಾದರೂ ವೈದ್ಯಕೀಯ ಕಾರಣಗಳಿಂದಾಗಿ ಇದು ಸಾಧ್ಯವಾಗಲೇ ಇಲ್ಲ.

ಆದರೆ ಜನರಿಗೆ ಸೇವೆ ಸಲ್ಲಿಸುವ ಅವರ ಆಕಾಂಕ್ಷೆಯು ಮುಂಬೈನಲ್ಲಿ ಕಾಂಟ್ರಾಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಿದ ನಂತರವೂ ಕಡಿಮೆಯಾಗಲಿಲ್ಲ, ಮತ್ತು ಅವರು 1995 ರಲ್ಲಿ “ಶರಣ ಸಂಕುಲ ಟ್ರಸ್ಟ್” ಅನ್ನು ಆರಂಭಿಸಿದರು. ಅವರು ಟ್ರಸ್ಟ್‌ನ ಸಂಸ್ಥಾಪಕ ಹಾಗೂ ಟ್ರಸ್ಟಿಯೂ ಸಹ ಹೌದು.

ಅವರು ಬಡತನದ ಸ್ಥಿತಿಯಿಂದ ಬಂದವರು ಮತ್ತು ಸಿವಿಲ್ ಎಂಜೀನಿಯರ್ ಆದ ನಂತರ, ಅವರು ಮುಂಬೈಯಲ್ಲಿ ಕಾಂಟ್ರಾಕ್ಟರ್ ಆಗಿ ಕೆಲಸ ಆರಂಭಿಸಿದರು. ತಾನು ಆರಿಸಿಕೊಂಡ ವೃತ್ತಿಯಲ್ಲಿ ಯಶ ಸಾಧಿಸಿದರು. ಇಷ್ಟಾದರೂ ಅವರು ತನ್ನ ತನವನ್ನು ಬಿಡಲಿಲ್ಲ. ವೃತ್ತಿ ಜೀವನದಲ್ಲೂ ಪ್ರಾಮಾಣಿಕತೆಯನ್ನು ಮುಂದುವರಿಸಿದರು. ಅವರು ವ್ಯವಹಾರದಲ್ಲಿ ನಷ್ಟವನ್ನೂ ಅನುಭವಿಸಿದರು. ಸಹಾಯಕರು ಮಾಡಿದ ಮೋಸದಿಂದಾಗಿ ಅವರು ಹಣ ಕಳೆದುಕೊಳ್ಳುವಂತಾಯಿತು. ಇದು ಅವರ ಮನಸ್ಸಿಗೆ ನೋವುಂಟುಮಾಡಿತು, ಇಂತಹ ಸನ್ನಿವೇಶವನ್ನು ನಮ್ಮಲ್ಲಿ ಅನೇಕ ಜನರು ಎದುರಿಸಿರುತ್ತಾರೆ.

ಇಂತಹ ಸನ್ನಿವೇಶಕ್ಕಾಗಿ ಬೇರೆಯವರನ್ನು ಆರೋಪಿಸುವ ಬದಲು, ತಾನು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ, ತನ್ನ ಮಾನಸಿಕ ಒತ್ತಡದ ಕಾರಣಗಳ ಬಗ್ಗೆ ಸ್ವತಃ ಆತ್ಮಾವಲೋಕನ ಮಾಡತೊಡಗಿದರು.

1998 ರಲ್ಲಿ ಅವರಿಗೆ ಕನಸಿನಲ್ಲಿ ತಮ್ಮ ಮನೆಯ ಆಕಾರ ಕಾಣಿಸತೊಡಗಿತು ಹಾಗೂ ಕನಸುಗಳನ್ನು ನನಸಾಗಿಸಿಕೊಳ್ಳುವ ಮಾರ್ಗದ ಬಗ್ಗೆ ಆಲೋಚಿಸತೊಡಗಿದರು. ಅವರಿಗೆ ಈ ಕನಸು ಕೆಲವು ಸಮಯದವರೆಗೆ ಸತತವಾಗಿ ಕಾಣತೊಡಗಿತು. ಅದೇ ಸಮಯದಲ್ಲಿಯೇ ಅವರು ತಮ್ಮ ಜೀವನದಲ್ಲಿ ಎದುರಿಸುತ್ತಿದ್ದ ಸಮಸ್ಯೆಗಳನ್ನು ಹಾಗೂ ತಮ್ಮ ಕನಸುಗಳಲ್ಲಿ ಕಾಣುತ್ತಿರುವುದನ್ನು ಒಂದಕ್ಕೊಂದು ಜೋಡಿಸಲು ಆರಂಭಿಸಿದರು.

ಇದರಿಂದ ಅವರು ತಮ್ಮ ಸಮಸ್ಯೆಗಳ ಮೂಲ ಕಾರಣವು ತಮ್ಮ ಮನೆಯಲ್ಲಿ ಹಾಗೂ ಕೆಲಸದ ಸ್ಥಳದಲ್ಲಿ ಇದೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಆರಂಭಿಸಿದರು. ಅವರು ವಿಷಯವನ್ನು ಇನ್ನಷ್ಟು ಚೆನ್ನಾಗಿ ತಿಳಿದುಕೊಳ್ಳಲು ಆರಂಭಿಸಿದರು. ನಮ್ಮ ಪೂರ್ವಜರು ತಿಳುವಳಿಕೆ ಹಾಗೂ ಸಂಪನ್ಮೂಲಗಳನ್ನು ಹೇಗೆ ಒಟ್ಟು ಸೇರಿಸಿ ಸುಂದರ ಕಲಾಕೃತಿಗಳನ್ನು, ಶಾಸ್ತ್ರಗಳನ್ನು ರೂಪಿಸಿದ್ದರು ಮತ್ತು ಅವು ಈ ಸಮಯದಲ್ಲಿಯೂ ಹೇಗೆ ನಿತ್ಯ ಸತ್ಯವಾಗಿಯೇ ಉಳಿದಿವೆ ಎಂದು ಅರ್ಥಮಾಡಿಕೊಂಡರು.

ಅವರು ಭಾರತೀಯ ಸಂಸ್ಕೃತಿ ಹಾಗೂ ವಾಸ್ತುಶಿಲ್ಪವನ್ನು ಅವಲಂಬಿಸಿ “ಸರಳವಾಸ್ತು”ವಿನ ಕಲ್ಪನೆಯನ್ನು ಮಾಡಿದ್ದು, ಅದನ್ನು ಬೆಳೆಸಿದ್ದು ಹಾಗೂ ಅದನ್ನೊಂದು ಜ್ಞಾನವಾಗಿ ನಿಖರ ರೂಪವನ್ನು ಕಾಲಾಂತರದಲ್ಲಿ ನೀಡಿದ್ದು ಮಹತ್ತರ ಸಂಶೋಧನೆಯಾಗಿದ್ದು, ಇದರ ಹಿಂದಿನ ಅವರ ಉದ್ದೇಶ ವ್ಯಕ್ತಿಯ ವೈಯಕ್ತಿಕ ಹಾಗೂ ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಯಶಸ್ಸನ್ನು ತರುವುದೇ ಆಗಿತ್ತು.

ಗುರೂಜಿಯವರ ಸಿದ್ಧಾಂತಗಳು

ಯುವಕ ಹಾಗೂ ಚೈತನ್ಯಶೀಲರಾಗಿದ್ದ ಡಾ. ಚಂದ್ರಶೇಖರ ಗುರೂಜಿ ರವರು ತತ್ವಜ್ಞಾನಿ, ಮಾರ್ಗದರ್ಶಕ ಸಲಹೆಗಾರ ಹಾಗೂ ಗುರೂಜಿಯಾಗಿ ಬದಲಾಗಲು ಅವರು ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಮಾಡಿದ ನಿರಂತರ ಪ್ರಯತ್ನವೇ ಕಾರಣವೆನ್ನಬಹುದು. ಅವರು ಇಂದು ಈ ಸ್ಥಾನದಲ್ಲಿರುವುದಕ್ಕೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಈ ಐದು ತತ್ವಗಳೇ ಕಾರಣ ಎನ್ನಬಹುದು.

1. ಯಾರಿಗೂ ಮೋಸ ಮಾಡದೇ ಇರುವುದು.

ಪ್ರಾಮಾಣಿಕತೆಯಿಂದ ಜೀವಿಸುವುದು ಆತ್ಮಕ್ಕೆ ನೀಡುವ ಉತ್ತೇಜನ ಮತ್ತು ಇದನ್ನು ಧರ್ಮದಂತೆ ಪಾಲಿಸುವ ಜನರು ತಮ್ಮ ವೈಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲಿ ಎಲ್ಲದರಲ್ಲಿಯೂ ಸಮೃದ್ಧಿಯನ್ನೇ ಕಾಣಲು ಬಯಸುತ್ತಾರೆ.

2. ನೀವು ಮೇಲ್ಮಟ್ಟದ ಸ್ಥಿತಿಗೆ ತಲುಪಿದರೂ ಸೌಜನ್ಯದಿಂದಿರುವುದು.

ನೀವು ಯಶಸ್ಸಿನ ತುತ್ತತುದಿಯನ್ನು ತಲುಪಿರಬಹುದು, ಆದರೆ ಯಾವಾಗಲೂ ನೆಲದ ಮೇಲಿರುವುದು ಹಾಗೂ ನಿಮ್ಮತನವನ್ನು ಉಳಿಸಿಕೊಳ್ಳುವುದು ಮುಖ್ಯ. ಇದು ಕೀರ್ತಿಯನ್ನು ತರುವುದನ್ನು ಖಾತ್ರಿ ಪಡಿಸುವುದು ಮತ್ತು ನಿಮ್ಮ ಸುತ್ತಲಿನ ಜನರಿಂದ ಅಪೇಕ್ಷಿತ ಬೆಂಬಲವನ್ನು ಒದಗಿಸುವುದು.

3. ನಿಮ್ಮ ಹೆತ್ತವರು ಸದಾ ಆನಂದದಿಂದ ಇರುವಂತೆ ಮಾಡಿ ಹಾಗೂ ಅವರಿಂದ ಆಶೀರ್ವಾದ ಪಡೆಯಿರಿ.

“ಯಾರದೇ ಕಾಳಜಿ ಮಾಡುವುದಾದರೂ, ನಿಮ್ಮನ್ನು ಯಾರು ಆರೈಕೆ ಮಾಡಿದ್ದಾರೆಯೋ ಅವರನ್ನು ನೋಡಿಕೊಳ್ಳುವುದು ಅತ್ಯಂತ ಗೌರವಯುತಕಾರ್ಯ”. ಹೆತ್ತವರನ್ನು ಆರೈಕೆ ಮಾಡುವ ಮೂಲಕ ಸತತವಾದ ಸಂತೋಷ, ಸಮೃದ್ಧಿ ಹಾಗೂ ಯಶಸ್ಸನ್ನು ನೀವು ಸ್ವತಃ ಹಾಗೂ ಕೌಟುಂಬಿಕವಾಗಿ ಪಡೆಯುವುದು ಸಾಧ್ಯವಿರುತ್ತದೆ.

4. ಅಗತ್ಯವಿರುವ ಜನರಿಗೆ ಸಹಾಯ ಮಾಡಿ.

ಅಗತ್ಯವಿರುವ ಜನರಿಗೆ ನಿಸ್ವಾರ್ಥವಾಗಿ ಸಹಾಯ ಮಾಡುವುದು ಮತ್ತು ಬೆಂಬಲವಾಗಿ ನಿಲ್ಲುವುದು, ಸಮೃದ್ಧಿಯನ್ನು ಇನ್ನಷ್ಟು ಹೆಚ್ಚಿಸುವುದು.

5. ಸಂತೋಷದಿಂದಿರಿ, ಇನ್ನೊಬ್ಬರಿಗೂ ಸಂತೋಷವನ್ನು ನೀಡಿ..

ಸಂತೋಷ ಎನ್ನುವುದು ನಾವು ವಾಸಿಸುವ ಹಾಗೂ ಕೆಲಸ ಮಾಡುವ ಸ್ಥಳದಿಂದಲೇ ಆರಂಭವಾಗುತ್ತದೆ. ಹಾಗಾಗಿ ಬೇರೆಯವರಿಗೆ ಸಂತೋಷ ನೀಡಲು ಸಾಧ್ಯವಾಗುವಂತೆ ಆತ್ಮ ಸಂತೋಷವನ್ನು ಪಡೆಯುವುದು ಮಹತ್ವದ್ದು.