ನಾನು ಓದಿರುವಂತೆ ದೇಶದ ಪ್ರತಿಯೊಂದು ರಾಜ್ಯಗಳ ವಾಸ್ತು ಪುಸ್ತಕದಲ್ಲಿ ವಾಸ್ತು ಸರಿ ಇರದಿದ್ದರೆ ಮನೆಯ ಮಾಲಿಕನ ಸಾವು ನಿಶ್ಚಿತ ಎಂದು ಬರೆದಿದ್ದಾರೆ. ಇನ್ನೊಂದು ಪುಸ್ತಕದಲ್ಲಿ ಮನೆಯ ನಡುವಿನ ಭಾಗದಲ್ಲಿ ಮನೆಯ ಮುಖ್ಯ ದ್ವಾರ ಇರಬಾರದು. ಇದ್ದರೆ ಕುಟುಂಬವೇ ಸರ್ವನಾಶ ಆಗುವುದು ಎಂದು ಬರೆದಿದ್ದಾರೆ.ಮನುಷ್ಯನಿಗೆ ಅಂತಿಮ ಭಯವೆಂದರೆ ಸಾವು. ಇಲ್ಲಿ ವಾಸ್ತುವಿನಿಂದಾಗಿ ಸಾವು ಬರುತ್ತದೆ ಎಂದರೆ ಜನ ಭಯ ಭೀತರಾಗುತ್ತಾರೆ. ಎಂಬುದು ಇವರ ವಿಚಾರ. ಯಾವುದಕ್ಕೂ ಒಂದು ಮಿತಿ ಇದೆ.ನಮ್ಮ ಹಿರಿಯರು ಒಂದು ಮಾತು ಹೇಳಿದ್ದಾರೆ “ನಿನ್ನಿಂದ ಆಗುವುದಾದರೆ ಒಳ್ಳೆಯದನ್ನು ಮಾಡು, ಆಗದಿದ್ದರೆ ಕೆಟ್ಟದ್ದಂತೂ ಮಾಡಲು ಹೋಗಬೇಡ”ಎಂದಿರುತ್ತಾರೆ ಆದರೆ ಅಲ್ಲಿ ನಡೆಯುತ್ತಿರುವುದು ಏನು? ಹೀಗೆ ಜ್ಞಾನ ಇರಲಾರದ ವ್ಯಕ್ತಿಗೆ ಸಾವಿನ ಭಯ ಹುಟ್ಟಿಸಿ ತಮ್ಮ ದಾರಿಗೆ ಎಳೆಯುವುದು ಮಹಾ ತಪ್ಪು. ಮನುಷ್ಯನ ಹುಟ್ಟು ಸಾವು ಯಾರ ಕೈಯಲ್ಲೂ ಇಲ್ಲ. ಯಾವ ವೇಳೆಗೆ ಸಾವು ಬರುವುದೋ ಆಗ ಸಾಯಲೇ ಬೇಕಾಗುತ್ತದೆ.
ಒಂದು ನಿಮಿಷವೂ ಕೂಡ ತಡ ಮಾಡಲು ಸಾಧ್ಯವಿಲ್ಲ.ಅಂದ ಮೇಲೆ ವಾಸ್ತುವಿನಿಂದ ಸಾವು ಉಂಟಾಗುತ್ತದೆ. ಎಂಬುದರಲ್ಲಿ ಯಾವುದೇ ರೀತಿಯ ಹುರುಳಿಲ್ಲ. ತಮ್ಮಲ್ಲಿ ನನ್ನ ವಿನಂತಿ ಇಷ್ಟೆ, ಇಂತಹ ಹೇಳಿಕೆ ಬರಹದಿಂದ ತಲೆಕೆಡಿಸಿಕೊಳ್ಳಬೇಡಿ. ಯಾವ ಮನೆಯೂ ತಮ್ಮ ಅಥವಾ ತಮ್ಮ ಕುಟುಂಬದವರ ಸಾವಿಗೆ ಕಾರಣವಾಗುವುದಿಲ್ಲ. ನಾನು ತಮಗೆ ಒಂದನೇಯ ಪ್ರಶ್ನೆಗೆ ಉತ್ತರಿಸಿದಂತೆಯೇ ವಾಸ್ತು ಎನ್ನುವುದು ಸಾವಿನವರೆಗೆ ಮಾತ್ರ ಸೀಮಿತ. ಆದರೆ ಸಾವಿಗೆ ಕಾರಣ ಅಲ್ಲ. ಎಷ್ಟು ದಿನ ನಾವು ಬದುಕಿರುವೆವೋ ಅಷ್ಟು ದಿನ ವಾತಾವರಣವನ್ನು ತಿಳಿಗೊಳಿಸಿಕೊಂಡು ಬಾಳಿ ಬದುಕುವ ಕಲೆ ಅಷ್ಟೆ. ದಯವಿಟ್ಟು ಯಾರೂ ಭಯಪಡಬೇಕಿಲ್ಲ.








