ವಾಸ್ತು ಎಂದರೆ ಮೂಢನಂಬಿಕೆ ಅಲ್ಲ. ಇದೊಂದು ವೈಜ್ಞಾನಿಕ ತಳಹದಿಯ ಮೇಲೆ ನಿಂತಿರುವ ಒಂದು ಕಲೆ. “ಸರಳ ವಾಸ್ತು ಎಂದರೆ ಮನುಷ್ಯನು ವಾತಾವರಣದ ಜೊತೆಗೆ ಸಾಮರಸ್ಯವಾಗಿ ಬಾಳಿ ಬದುಕುವ ಒಂದು ಕಲೆ “. ಅಂದರೆ ಇನ್ನೊಂದು ಅರ್ಥದಲ್ಲಿ ವಾತಾವರಣವನ್ನು ತಿಳಿಗೊಳಿಸಿಕೊಂಡು ಬದುಕುವ ಕಲೆಯಾಗಿದೆ. ಇನ್ನೂ ಆಳವಾಗಿ ನೋಡಿದಾಗ ಯಾವಾಗಲೂ ವಾತಾವರಣದಲ್ಲಿ ಶಕ್ತಿಯ (Energy) ಹರಡುವಿಕೆ ಇರುತ್ತದೆ. ಆ ಶಕ್ತಿಯನ್ನು ಎರಡು ಭಾಗಗಳನ್ನಾಗಿ ವಿಂಗಡಿಸಬಹುದು. ಒಂದು ಧನಾತ್ಮಕ ಶಕ್ತಿ ಹಾಗೂ ಇನ್ನೊಂದು ಋಣಾತ್ಮಕ ಶಕ್ತಿ. ಋಣಾತ್ಮಕ ಶಕ್ತಿಯನ್ನು ಕಡಿಮೆಗೊಳಿಸಿ ಧನಾತ್ಮಕ ಶಕ್ತಿಯ ಹರಡುವಿಕೆಯನ್ನು ಹೆಚ್ಚಿಸುವ ವಿಧಾನ ಹಾಗೂ ಮನೆಯಲ್ಲಿ ಎಲ್ಲ ಸ್ಥಳಗಳನ್ನು ವಿಶ್ಲೇಷಿಸಿ ಸಣ್ಣ ಮಾರ್ಪಾಡುಗಳನ್ನು ಮಾಡುವುದೇ ಸರಳ ವಾಸ್ತು ಶಾಸ್ತ್ರ. ಇದರಿಂದ ಸುಖ, ಶಾಂತಿ ಹಾಗೂ ನೆಮ್ಮದಿಯಿಂದ ಬಾಳಿ ಬದುಕಬಹುದು. ಇನ್ನು ಈ ಶಕ್ತಿಯ ಬಗ್ಗೆ ವೈಜ್ಞಾನಿಕವಾಗಿ ಕೆಳಗಿನ ಉದಾಹರಣೆ ಮೂಲಕ ವಿವರಿಸುವೆನು.
ಉದಾಹರಣೆ–1 : ಒಂದು ಚಿಕ್ಕ ಮಗುವನ್ನು ಯಾವುದಾದರೂ ಸಮಾರಂಭಕ್ಕೆ ಕರೆದುಕೊಂಡು ಹೋಗಿ ಮನೆಗೆ ಮರಳಿ ಬಂದಾಗ ಆ ಮಗು ಅಳಲು ಪ್ರಾರಂಭಿಸುವುದು. ಎಷ್ಟೇ ಸಮಾಧಾನ ಮಾಡಿದರೂ ಮಗು ಅಳುವುದನ್ನು ನಿಲ್ಲಿಸುವುದಿಲ್ಲ. ಆ ವೇಳೆಯಲ್ಲಿ ಮನೆಯ ಹೆಣ್ಣು ಮಕ್ಕಳು ಮಗುವಿಗೆ ದೃಷ್ಠಿಯಾಗಿದೆ ಎಂದು ತಿಳಿದು ಕೈಯಲ್ಲಿ ಉಪ್ಪನ್ನು ತೆಗೆದುಕೊಂಡು ಮೂರು ಸಲ ಮಗುವಿನ ಮೇಲೆ ನಿವಾಳಿಸುತ್ತಾರೆ. ಆಮೇಲೆ ಯಾರಿಗೂ ತೋರಿಸದೇ ಬೆಂಕಿಗೆ ಹಾಕುವರು ಅಥವಾ ನೀರಿನಲ್ಲಿ ಹಾಕುವರು.10-15 ನಿಮಿಷದಲ್ಲಿ ಮಗು ಅಳುವುದನ್ನು ನಿಲ್ಲಿಸುತ್ತದೆ. ಇದು ಸರ್ವೇ ಸಾಮಾನ್ಯ ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗಾದರೆ ಮಗು ಅಳಲು ಕಾರಣವೇನು? ಜೊತೆಯಲ್ಲಿದ್ದ ದೊಡ್ಡವರು ಯಾಕೆ ಅಳಲಿಲ್ಲ? ಮುಂದೆ ಉಪ್ಪನ್ನೇ ತೆಗೆದುಕೊಳ್ಳಲು ಕಾರಣವೇನು? ತೊಗರಿ ಬೇಳೆ ಅಥವಾ ಕಡ್ಲೆ ಬೇಳೆಯನ್ನು ಯಾಕೆ ತೆಗೆದುಕೊಳ್ಳಲಿಲ್ಲ? ಮೂರು ಸಲ ನಿವಾಳಿಸಿದ ಮೇಲೆ ಯಾರಿಗೂ ಯಾಕೆ ತೋರಿಸಲಿಲ್ಲ? ಅದನ್ನು ಬೆಂಕಿಯಲ್ಲಿ ಹಾಕಲು ಕಾರಣವೇನು? ಕಸದ ಬುಟ್ಟಿಯಲ್ಲಿ ಯಾಕೆ ಎಸೆಯಲಿಲ್ಲ? ಇವೆಲ್ಲ ಪ್ರಶ್ನೆಗಳಿಗೆ ಯಾರೂ ಉತ್ತರ ಹುಡುಕಲು ಹೋಗಲಿಲ್ಲ. ಕಾರಣ ಇಷ್ಟೇ, ಪರಿಹಾರ ದೊರಕಿದ ಮೇಲೆ ಉತ್ತರಕ್ಕೆ ಕಾರಣ ಹುಡುಕುವ ಪ್ರಯತ್ನ ಮಾಡುವುದಿಲ್ಲ. ಆದರೆ ಅದರ ನಿಜವಾದ ವೈಜ್ಞಾನಿಕ ಕಾರಣ ಏನೆಂದರೆ ನಾನು ಮೊದಲು ತಿಳಿಸಿದ ಹಾಗೆ ಪ್ರತಿಯೊಂದು ಸ್ಥಾನದಲ್ಲಿ ಧನಾತ್ಮಕ ಹಾಗೂ ಋಣಾತ್ಮಕ ಶಕ್ತಿಯ ಹರಡುವಿಕೆ ಇರುತ್ತದೆ. ಬಹಳಷ್ಟು ಜನ ಒಂದೇ ಜಾಗದಲ್ಲಿ ಸೇರಿರುವುದರಿಂದ ಅಲ್ಲಿ ಋಣಾತ್ಮಕ ಶಕ್ತಿಯ ಹರಡುವಿಕೆಯು ತುಂಬಾ ಇರುತ್ತದೆ. ಆ ಋಣಾತ್ಮಕ ಶಕ್ತಿಯು ಮಗುವನ್ನು ಆವರಿಸಿಕೊಳ್ಳುತ್ತದೆ. ಆಗ ಮಗುವಿಗೆ ತಡೆದುಕೊಳ್ಳಲು ಸಾಧ್ಯವಾಗದೆ ಅದನ್ನು ಅಳುವಿನ ರೂಪದಲ್ಲಿ ವ್ಯಕ್ತಪಡಿಸುತ್ತದೆ. ಇನ್ನು ದೊಡ್ಡವರು ಅಳದಿರುವ ಕಾರಣ ಅವರಲ್ಲಿ ತಾಳುವಿಕೆಯ ಶಕ್ತಿ (Resistance Power) ಇರುವುದರಿಂದ ಋಣಾತ್ಮಕ ಶಕ್ತಿಯ ಪ್ರಭಾವ ಅವರ ಮೇಲೆ ಪರಿಣಾಮ ಬೀರುವುದಿಲ್ಲ. ಇನ್ನೂ ಉಪ್ಪನ್ನೇ ತೆಗೆದುಕೊಳ್ಳಲು ಕಾರಣವೇನೆಂದು ಹುಡುಕಿದರೆ ನಮ್ಮ ಹಿರಿಯರಿಗೆ ಉಪ್ಪು ಋಣಾತ್ಮಕ ಶಕ್ತಿಯನ್ನು ಹೀರುತ್ತದೆ ಎನ್ನುವ ತಿಳುವಳಿಕೆ ಇತ್ತು. ಆದ್ದರಿಂದ ತೊಗರಿ ಬೇಳೆ ಹಾಗೂ ಕಡ್ಲೆ ಬೇಳೆಯನ್ನು ತೆಗೆದುಕೊಳ್ಳಲಿಲ್ಲ. ಉಪ್ಪನ್ನು ಮೂರು ಸಲ ನಿವಾಳಿಸಿದ ಮೇಲೆ ಅದನ್ನು ಯಾರಿಗೂ ತೋರಿಸದಿರುವ ಕಾರಣವೇನೆಂದರೆ, ತೋರಿಸಿದರೆ ಋಣಾತ್ಮಕ ಶಕ್ತಿಯು ಮತ್ತೆ ಅಲ್ಲಿಯೇ ಹರಡುವುದು. ಅದಕ್ಕೆ ತೋರಿಸಲಿಲ್ಲ. ಮುಂದೆ ಕಸದ ಬುಟ್ಟಿಗೆ ಹಾಕದಿರಲು ಕಾರಣ ಹುಡುಕಿದರೆ ಅದು ಅಲ್ಲೇ ಹರಡುವ ಸಾಧ್ಯತೆಯಿಂದಾಗಿ ಅದನ್ನು ಬೆಂಕಿಗೆ ಹಾಕಿದರು. ಈ ಉದಾಹರಣೆಯ ಮೂಲಕ ಸರಳ ವಾಸ್ತುವು ಹಿರಿಯರು ಮಾಡಿಕೊಂಡು ಬಂದ ಪದ್ಧತಿಯ ಆಧಾರದ ಮೇಲೆ ಇದೆ ಎಂಬುದು ತಿಳಿಯುತ್ತದೆ.
ಉದಾಹರಣೆ-2 : ನೀವೆಲ್ಲರೂ ದೇವಸ್ಥಾನ, ಗುಡಿ, ಚರ್ಚ್, ಮಸೀದಿಗಳಿಗೆ ಹೋಗುತ್ತಿರುತ್ತೀರಿ. ಯಾರಾದರೂ ನಿಮಗೆ ನೀವು ಏಕೆ ಮಸೀದಿ, ದೇವಸ್ಥಾನಕ್ಕೆ ಹೋಗುತ್ತೀರಿ ಎಂದರೆ ನಿಮ್ಮ ಉತ್ತರ ಏನು? ಸರ್ವೆ ಸಾಮಾನ್ಯವಾಗಿ ಎಲ್ಲರ ಉತ್ತರ ಮನಃಶಾಂತಿಗೋಸ್ಕರ ಎಂದಿರುತ್ತಾರೆ. ಹಾಗಾದರೆ ನಿಮಗೆ ಮನಃಶಾಂತಿ ದೇವಸ್ಥಾನದಲ್ಲೇ ಸಿಗಲು ಕಾರಣವೇನು? ಮನೆಯಲ್ಲಿ ಏಕೆ ಸಿಗುವುದಿಲ್ಲ? ದೇವಸ್ಥಾನದಲ್ಲಿ ಮನಃಶಾಂತಿ ಕೊಡುವವರು ಯಾರು…? ದೇವರೇ…..? ಅಥವಾ ಬೇರೆ ಏನಾದರೂ ವಸ್ತುಗಳೇ? ಈ ವಿಷಯದ ಬಗ್ಗೆ ಸರಳವಾಸ್ತುವಿನ ವೈಜ್ಞಾನಿಕ ವಿಶ್ಲೇಷಣೆ ಏನು?
ನೀವು ನೋಡಿರುವಂತೆಯೇ ದೇವಸ್ಥಾನದ ಹೊರಗೆ ಕಾಲು ತೊಳೆಯಲು ನಳ ಇರಿಸಿರುವರು. ಯಾರೇ ದೇವಸ್ಥಾನದ ಒಳಗೆ ಹೋಗುವಾಗ ಕಾಲು ತೊಳೆದುಕೊಂಡೇ ಹೋಗುವರು ಇದರ ಅರ್ಥ ನೀರಿನಿಂದ ಋಣಾತ್ಮಕ ಶಕ್ತಿ (Negative Energy) ತೆಗೆದು ನಂತರ ದೇವರ ಸನ್ನಿಧಿಗೆ ಹೋಗಿ ಘಂಟೆ ಹೊಡೆಯುವರು. ಒಬ್ಬರ ನಂತರ ಒಬ್ಬರು ನಿರಂತರವಾಗಿ ಘಂಟೆಯನ್ನು ಹೊಡೆಯುವುದರಿಂದ ಅದರ ಶಬ್ಧದ ತರಂಗಗಳ ಮೂಲಕ ಅಲ್ಲಿರುವ ಋಣಾತ್ಮಕ ಶಕ್ತಿಯು ಹೊರದೂಡಲ್ಪಡುವುದು. ನಂತರ ಧನಾತ್ಮಕ ಶಕ್ತಿ ವೃದ್ಧಿಸುವ ಹೂಗಳ ಮೂಲಕ ಹಾಗೂ ಆರತಿ, ಮಂತ್ರಗಳ ಮೂಲಕ ಅಲ್ಲಿ ಧನಾತ್ಮಕ ಶಕ್ತಿಯ ಹರಡುವಿಕೆಯು ಹೆಚ್ಚಾಗುವುದು.ಆಗ ಯಾರೇ ಆಗಲಿ ಆ ಸ್ಥಾನದಲ್ಲಿ ಕುಳಿತಾಗ ಮಾತ್ರ ಶಾಂತ ವಾತಾವರಣದ ಕಲ್ಪನೆ ಬರುವುದು. ಇದನ್ನು ನಾನು ಹೇಳುತ್ತಿರುವೆನೆಂದು ನೀವು ನಂಬಬೇಕಿಲ್ಲ. ನೀವೇ ಪರೀಕ್ಷೆ ಮಾಡಿ ನೋಡಬಹುದು. ಯಾವುದೇ ದೇವಸ್ಥಾನದ ಹೊರಗಿರುವ ನಳ ಉಪಯೋಗಿಸಬೇಡಿ, ಘಂಟೆಯನ್ನು ತೆಗೆಯಲು ಹೇಳಿ, ಬಂದವರು ಯಾರೂ ದೇವರಿಗೆ ಹೂ ಏರಿಸಬೇಕಿಲ್ಲ, ಅಗರಬತ್ತಿ, ಕರ್ಪೂರ ಹಚ್ಚುವುದು ಬೇಡ. ಆದರೆ ಅದೇ ದೇವರು, ಅದೇ ದೇವಸ್ಥಾನ ಹಾಗೂ ಅದೇ ಕಳಸ ಇವು ಅಲ್ಲೇ ಇರುವವು. ಅಲ್ಲಿ ಋಣಾತ್ಮಕ ಶಕ್ತಿಯು ಅಧಿಕವಾಗಿ ಧನಾತ್ಮಕ ಶಕ್ತಿಯೇ ಕಡಿಮೆಯಾಗಿ ಆ ದೇವಸ್ಥಾನಕ್ಕೆ ಯಾರಿಗೂ ಹೊಗುವ ಮನಸ್ಸೇ ಬರುವುದಿಲ್ಲ. ನೂರಾರು ಜನ ಬರುತ್ತಿರುವ ದೇವಸ್ಥಾನ ಕೆಲವೆ ದಿನಗಳಲ್ಲಿ ಯಾರೂ ಬರದಿರುವ ಹಾಗೆ ಆಗುವುದು. ಆ ದೇವಸ್ಥಾನದಲ್ಲಿ ದೇವರು ಇರುತ್ತಾನೆ, ಕಳಸವೂ ಇರುತ್ತದೆ, ಆದರೆ ಮನಸ್ಸಿಗೆ ಪ್ರಶಾಂತ ಭಾವನೆ ಮೂಡಿ ಬರುವುದಿಲ್ಲ. ಸರಳ ವಾಸ್ತುವಿನ ಮೂಲಕ ಮನೆಯಲ್ಲಿಯೂ ಸಹಿತ ದೇವಸ್ಥಾನದಲ್ಲಿ ಪಡೆಯುವಂತೆ ಮನಃಶಾಂತಿ ಪಡೆಯಲು ಸಾಧ್ಯ.
ಹುಬ್ಬಳ್ಳಿಯಲ್ಲಿ ನಾನು ಉಪನ್ಯಾಸ ನೀಡುತ್ತಿರುವಾಗ ಮುಸ್ಲಿಂ ವ್ಯಕ್ತಿಯೋರ್ವರು ಎದ್ದು ನಿಂತು ನೀವು ದೇವಸ್ಥಾನದಲ್ಲಿ ಘಂಟೆ ಉಪಯೋಗಿಸುತ್ತೀರಿ ನಿಮಗೆ ಶಾಂತಿ ಸಿಗುತ್ತದೆ. ಆದರೆ ನಾವು ಮುಸ್ಲಿಂ ಜನಾಂಗದವರು ಮಸೀದಿಯಲ್ಲಿ ನಾವು ಘಂಟೆಯನ್ನು ಉಪಯೋಗಿಸುವುದಿಲ್ಲ. ಆದರೆ ನಮಗೆ ಹೇಗೆ ಮನಃಶಾಂತಿ ಸಿಗುವುದು ಎಂದು ಕೇಳಿದರು. ನಾನು ಆಗ ಅವರಿಗೆ ನೀವು ಮಸೀದಿಗೆ ಹೇಗೆ ಹೋಗುವಿರಿ ಎಂದು ಕೇಳಿದಾಗ ಅವರು ತಾವೂ ಸಹಿತ ಕಾಲು ತೊಳೆದುಕೊಂಡೇ ಹೋಗುವೆನೆಂದರು. ಆಗ ನಾನು ಅವರಿಗೆ ತಿಳಿಸಿ ಹೇಳಿದೆ. ನಮ್ಮಲ್ಲಿ ಹೇಗೆ ಘಂಟೆಯ ಓಂಕಾರ ನಾದದಿಂದ ಋಣಾತ್ಮಕ ಶಕ್ತಿಯು ಹೊರದೂಡಲ್ಪಡುವುದೋ ಅದೇ ರೀತಿ ನೀವು ಅಲ್ಲಾ ಹೋ ಅಕ್ಬರ ಎಂದಾಗ ಇದರ ಧ್ವನಿಯ ತರಂಗಗಳ ಮೂಲಕ ಅಲ್ಲಿಯ ಋಣಾತ್ಮಕ ಶಕ್ತಿಯು ಹೊರದೂಡಲ್ಪಡುವುದು ಎಂದಾಗ ಒಪ್ಪಿಕೊಂಡರು. ಇದೇ ರೀತಿಯಲ್ಲಿ ಕ್ರೈಸ್ತರಲ್ಲಿ ಚರ್ಚಿನ ಹೊರಗಡೆಗೆ ದೊಡ್ಡದಾದ ಘಂಟೆ ಕಟ್ಟಿರುವುದನ್ನು ನೀವುಗಳು ನೋಡಿರಬಹುದು. ಪ್ರಾರ್ಥನಾ ಸಮಯಕ್ಕೆ ಮುಂಚಿತವಾಗಿ ಈ ಘಂಟೆಯನ್ನು ಹೊಡೆಯುವುದನ್ನು ಕಾಣಬಹುದು. ಇದರ ಮೂಲಕ ಋಣಾತ್ಮಕ ಶಕ್ತಿಯು ಆ ಸ್ಥಳದಿಂದ ಹೊರದೂಡಲ್ಪಡುವುದು.ಮುಂದೆ ಮೇಣದ ಬತ್ತಿಯನ್ನು ಹಚ್ಚುವುದರ ಮೂಲಕ ಹಾಗೂ ಹೂವುಗಳನ್ನು ಅರ್ಪಿಸುವ ಮೂಲಕ ಅಲ್ಲಿ ಧನಾತ್ಮಕ ಶಕ್ತಿಯು ಉತ್ಪನ್ನವಾಗುತ್ತಿರುತ್ತದೆ. ಈ ಕಾರಣಕ್ಕಾಗಿಯೇ ಚರ್ಚಿನಲ್ಲಿಯು ಸಹಿತ ತಮಗೆ ಪ್ರಶಾಂತ ವಾತಾವರಣವು ಕಂಡುಬರುತ್ತದೆ. ಈ ಮೂಲಕ ಸರಳ ವಾಸ್ತುವು ಯಾವುದೇ ಜಾತಿ–ಧರ್ಮಕ್ಕೆ ಸಂಬಂಧ ಪಟ್ಟಿಲ್ಲವೆಂದು ರುಜುವಾತಾಗುತ್ತದೆ. ಸರಳವಾಸ್ತುವು ಸಂಪೂರ್ಣವಾಗಿ ವೈಜ್ಞಾನಿಕ ತಳಹದಿಯ ಮೇಲೆ ಆಧಾರಗೊಂಡಿದೆ.








