ಪ್ರಚಲಿತ ವಾಸ್ತು ಪುಸ್ತಕಗಳಲ್ಲಿ ಹಾಗೂ ವಾಸ್ತು ತಜ್ಞರು ದೇವಸ್ಥಾನದ ನೆರಳು ಮನೆಯ ಮೇಲೆ ಬೀಳಬಾರದು ಎಂದು ಬರೆದಿರುತ್ತಾರೆ ಹಾಗೂ ಹೇಳಿರುತ್ತಾರೆ. ದೇವಸ್ಥಾನದ ನೆರಳು ಮನೆಯ ಮೇಲೆ ಬೀಳಬಾರದು ಎಂಬ ಮಾತಿನ ನೈಜ ಅರ್ಥವೇನು? ದೇವಸ್ಥಾನ ಅಂದಾಜು ಎತ್ತರ 30 ಫೀಟು ಇರುತ್ತದೆ. ಅದರ ನೆರಳು ಅಂದರೆ 30 ಫೀಟು ಬಿಟ್ಟು ಮನೆಯಿದ್ದರೆ ಕೆಟ್ಟ ಪರಿಣಾಮ ಉಂಟಾಗುವುದಿಲ್ಲ. ಅದು 30 ಫೀಟು ಒಳಗಡೆ ಬಂದಿದ್ದರೆ ಕೆಟ್ಟ ಪರಿಣಾಮ ಬೀರುತ್ತದೆ.
ಇವತ್ತಿನ ಎಲ್ಲ ವಾಸ್ತು ಪುಸ್ತಕಗಳಲ್ಲಿ ಹೀಗೆ ಇದ್ದ ಮನೆಯಲ್ಲಿ ವಾಸಿಸಬಾರದು ಅಲ್ಲಿ ಯಾರು ವಾಸಿಸುವರೋ ಅವರು ಸಾಯುವರು ಎನ್ನುವ ಮಟ್ಟಿಗೆ ಬರೆದಿರುತ್ತಾರೆ. ಅದಕ್ಕಾಗಿ ಆ ಮನೆಯನ್ನು ಬಿಡುವುದು ಒಳಿತು. ಅಲ್ಲಿ ವಾಸಿಸಬಾರದು ಎಂದೂ ಕೂಡ ಬರೆದಿರುವರು. ಇನ್ನು ಈ ರೀತಿಯ ವಾಸ್ತು ಪುಸ್ತಕವನ್ನು ಬರೆದ ವಾಸ್ತು ಪಂಡಿತರಲ್ಲಿ ನಾನೊಂದು ಪ್ರಶ್ನೆಯನ್ನು ಕೇಳಬಯಸುತ್ತೇನೆ.
ನಾವು ಒಂದು ವೇಳೆ 10-15 ಲಕ್ಷ ರೂಪಾಯಿ ಖರ್ಚು ಮಾಡಿ ಮನೆಯನ್ನು ಕಟ್ಟಿಸಿರುತ್ತೇವೆ. ಆಮೇಲೆ ಆ ಮನೆಯ ಎದುರಿನಲ್ಲಿ ಯಾರಾದರೂ ದೇವಸ್ಥಾನ ಕಟ್ಟಿಸಿದರೆನ್ನಿ.ತಾವು ಬರೆದ ಪ್ರಕಾರ ಆ ಮನೆಯಲ್ಲಿ ವಾಸಿಸುವುದು ಸರಿಯಲ್ಲ ಎಂದು ಆ ಮನೆಯನ್ನು ಮಾರಬೇಕೆಂದರೆ ಮನೆಯನ್ನು ಯಾರೂ 5-6 ಲಕ್ಷಕ್ಕೂ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಈ ರೀತಿಯ ಮನೆ ತೆಗೆದುಕೊಂಡು ವಾಸಿಸಿದರೆ ಕೇಡು ಖಂಡಿತ ಎಂದು ತಾವು ಪುಸ್ತಕದಲ್ಲಿ ಬರೆದುಬಿಟ್ಟಿದ್ದೀರಿ. ಒಂದು ವೇಳೆ ಸಾಲ ಮಾಡಿ ಮನೆ ಕಟ್ಟಿಸಿದವರು ಏನು ಮಾಡಬೇಕು? ತಾವು ಹೇಳಿದಂತೆ ಮನೆಯನ್ನು ಬಿಡಬೇಕೆ? ದಯವಿಟ್ಟು ಏನೇನೊ ಬರೆದು ಜನರನ್ನು ಭಯ ಪಡಿಸುವುದಕ್ಕಿಂತ ಅದಕ್ಕಿರುವ ವೈಜ್ಞಾನಿಕ ಕಾರಣ ಹಾಗೂ ಪರಿಹಾರದ ಬಗ್ಗೆ ತಿಳಿದುಕೊಳ್ಳುವುದು ಒಳಿತು.
ಇನ್ನು ನಮ್ಮ ಸರಳ ವಾಸ್ತುವಿನ ಪ್ರಕಾರ ದೇವಸ್ಥಾನದ ಎದುರು ಮನೆ ಇರಬಾರದು. ಅದರಿಂದ ತೊಂದರೆ ಉಂಟಾಗುತ್ತದೆ. ಆದರೆ ನೀವು ಬರೆದಿರುವಂತೆ ಸಾವಿನವರೆಗೂ ಅಲ್ಲ. ದೇವಸ್ಥಾನದ ಎದುರು ಮನೆ ಏಕಿರಬಾರದು ಎಂಬುದರ ಬಗ್ಗೆ ವೈಜ್ಞಾನಿಕ ಕಾರಣವನ್ನು ಜನತೆ ಮುಂದಿಡಲು ಬಯಸುತ್ತೇನೆ.
ನಾನು ಮೊದಲಿನ ಅಧ್ಯಾಯದಲ್ಲಿ ತಿಳಿಸಿರುವಂತೆ ದೇವಸ್ಥಾನದಲ್ಲಿ ಮನಃಶಾಂತಿ ಸಿಗುವುದು. ದೇವರಿಂದ ಅಲ್ಲ. ಹಾಗಾದರೆ ಅಲ್ಲಿ ಮನಃಶಾಂತಿ ಸಿಗಲು ಕಾರಣವೇನು? ಅಲ್ಲಿರುವ ನಳದಿಂದ (ನೀರು) ಹಾಗೂ ಘಂಟೆಯ ನಾದದಿಂದ ಋಣಾತ್ಮಕ ಶಕ್ತಿಯ ಹೊರದೂಡುವಿಕೆ, ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವ ಹೂ, ಆರತಿ, ಮಂಗಳಾರತಿ, ಧೂಪ, ದೀಪ ಇವುಗಳಿಂದಲೆ ಮನಃಶಾಂತಿ, ಸಮಾಧಾನ ದೊರಕುವುದು. ಇನ್ನು ಘಂಟೆ ನಾದದಿಂದ ಹೊರದೂಡಲ್ಪಡುವ ಋಣಾತ್ಮಕ ಶಕ್ತಿಯು ಎಲ್ಲಿಗೆ ಹೋಗಬೇಕು? ಯಾರ ಮನೆಯು ಸಮೀಪದಲ್ಲಿರುವುದೋ, ಆ ಮನೆಯೊಳಗೆ ಋಣಾತ್ಮಕ ಶಕ್ತಿ ನುಗ್ಗುತ್ತದೆ. ಆಗ ಆ ಮನೆಯು ಅಶಾಂತಿಯ ಮನೆಯಾಗುವುದು, ಅನಾರೋಗ್ಯದ ಮನೆಯಾಗುವುದು. ಅಲ್ಲಿ ಯಾರು ವಾಸಿಸುವರೋ ಸುಖದಿಂದ ಬಾಳಲು ಸಾಧ್ಯವಿಲ್ಲ. ಇದುವೇ ನಿಜವಾದ ವೈಜ್ಞಾನಿಕ ಕಾರಣ. ಇದಕ್ಕೂ ಸಹಿತ ಪರಿಹಾರವಿದೆ. ಸರಳ ವಾಸ್ತುವಿನ ಸರಳ ಸಲಹೆಯಿಂದ ಋಣಾತ್ಮಕ ಶಕ್ತಿಯನ್ನು ವಾಪಸ್ ಕಳಿಸುವ ವಿಧಾನದ ಮೂಲಕ ಅದೆ ಮನೆಯಲ್ಲಿ ಶಾಂತಿ ಸಮಾಧಾನ ನೆಮ್ಮದಿಯಿಂದ ಬಾಳಲು ಸಾಧ್ಯ.
ಇದೇ ರೀತಿಯಲ್ಲಿ ಮಸೀದಿ ಅಥವಾ ದರ್ಗಾದ ಎದುರಿನಲ್ಲಿಯೂ ಕೂಡ ಮನೆ ಬಂದಿದ್ದಲ್ಲಿ ಆ ಮನೆಯಲ್ಲಿ ಅಶಾಂತಿ, ಮಾನಸಿಕ ಕಿರಿಕಿರಿ ಹಾಗೂ ಸಂಬಂಧದಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಹೀಗಿರುವಾಗ ಮನೆಯನ್ನು ಬದಲಾಯಿಸದೆ ಸರಳ ವಾಸ್ತುವಿನ ಸುಲಭ ಉಪಾಯದ ಮೂಲಕ ಪರಿಹಾರ ಪಡೆಯಬಹುದು.










