ಜನತೆಯ ಹಾಗೂ ಇಂದಿನ ವಾಸ್ತು ತಜ್ಞರ ಮುಂದೆ ನಾನೊಂದು ಪ್ರಶ್ನೆ ಕೇಳಲು ಇಚ್ಛಿಸುತ್ತೇನೆ.
ಯಾರು ಬಾಡಿಗೆ ಮನೆ ಉದ್ಯೋಗ ಸ್ಥಳದಲ್ಲಿ ಇರುವರೋ ಅವರು ಯಾವುದೇ ರೀತಿಯ ಅಭಿವೃದ್ಧಿ ಹೊಂದಿಲ್ಲವೇ?
ಈ ಪ್ರಶ್ನೆಗೆ ಯಾರಿಂದಾದರೂ ಉತ್ತರಿಸಲು ಸಾಧ್ಯವೇ? ನೀವೇ ಸ್ವಲ್ಪ ಶಾಂತ ರೀತಿಯಿಂದ ಕುಳಿತು ನಿಮ್ಮ ಸ್ನೇಹಿತರಲ್ಲಾಗಲಿ ಸಂಬಂಧಿಕರಲ್ಲಾಗಲಿ ಬಾಡಿಗೆ ಮನೆಯಲ್ಲಿ ಇದ್ದು ಅಭಿವೃದ್ಧಿ ಹೊಂದಿರುವರೊ ಇಲ್ಲವೇ? ಸ್ವಲ್ಪ ಯೋಚಿಸಿ ನೋಡಿ ನಿಮ್ಮ ಕಣ್ಣ ಮುಂದೆಯೇ ಸ್ಪಷ್ಟ ಚಿತ್ರಣ ಮೂಡುತ್ತದೆ. ಎಷ್ಟೊಂದು ಜನ ಬಾಡಿಗೆ ಅಂಗಡಿ, ಹೋಟೆಲನ್ನು ತೆಗೆದುಕೊಂಡು ಹಣಗಳಿಸಿ ಸ್ವಂತ ಮನೆ ಕಟ್ಟಿಲ್ಲವೇ? ಅಂದರೆ ಮೇಲಿನ ವಿಷಯದ ಬಗ್ಗೆ ನೀವೆ ಯೋಚಿಸಿ ನೋಡಿ.
ಒಂದು ಸಲ ನಾನು ಬೆಳಗಾವಿನಲ್ಲಿ ಉಪನ್ಯಾಸ ಕೊಡಲು ಹೋಗಿದ್ದಾಗ ಓರ್ವ ಹಿರಿಯರು ನಮ್ಮನ್ನು ಬೇಟಿಯಾಗಲು ಬಂದಿದ್ದರು. ನನ್ನದೊಂದು ಸ್ವಂತ ಮನೆ ಇದೆ, ಗ್ರೌಂಡ್ ಪ್ಲೋರನ್ನು ಬಾಡಿಗೆಗೆ ಕೊಟ್ಟಿರುತ್ತೇನೆ. ಮೇಲಿನ ಮನೆಯಲ್ಲಿ ನಾನು ವಾಸಿಸುತ್ತಿದ್ದೇನೆ. ನಾನು ವಾಸ್ತುವನ್ನು ಪೂರ್ತಿ ಕಟ್ಟಡಕ್ಕೆ ಅಳವಡಿಸಬೇಕೆ ಎಂದು ಕೇಳಿದರು. ಆಗ ನಾನು ಅವರಿಗೆ ಹೇಳಿದೆ, ಯಾವಾಗ ನೀವು ಗ್ರೌಂಡ್ ಫ್ಲೋರನ್ನು ಬಾಡಿಗೆಗೆ ಕೊಟ್ಟಿರುವಿರೋ ಅದು ಅವರ ಮನೆ. ಮನೆಯೇನೋ ನಿಮ್ಮದೇ ಇರಬಹುದು, ಏನೋ ಒಳ್ಳೆಯದು / ಕೆಟ್ಟದ್ದು ಆದರೂ ಅವರಿಗೆ ಆಗುವುದು. ನೀವು ವಾಸಿಸುತ್ತಿರುವ ಭಾಗವಷ್ಟೆ ನಿಮ್ಮ ಮೇಲೆ ಒಳ್ಳೆಯ ಅಥವಾ ಕೆಟ್ಟ ಪ್ರಭಾವ ಬೀರುತ್ತದೆ. ಆದರೆ ಬಾಡಿಗೆಯವರಿಗೆ ಅಲ್ಲ. ಆದ್ದರಿಂದ ನೀವು ವಾಸಿಸುವ ಸ್ಥಳವನ್ನಷ್ಟೇ ವಾಸ್ತು ಮಾಡಿಸಿರಿ ಎಂದೆನು. ಮತ್ತೆ ಮುಂದುವರೆದು ನಾನು ಅವರಿಗೆ ಹೇಳಿದೆ ನಿಮ್ಮ ಬಾಡಿಗೆದಾರರ ಹುಟ್ಟು ದಿನಾಂಕದ ಮೇಲೆ ಮನೆಯ ಬಾಗಿಲು ಅವರ ಒಳ್ಳೆಯ ದಿಕ್ಕಿನಲ್ಲಿ ಬಂದಿದ್ದರೆ ಅವರು ಅದೇ ಬಾಡಿಗೆ ಮನೆಯಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿರುತ್ತಾರೆ. ಅದೇ ನೀವು ವಾಸಿಸುವ ಮನೆಯ ಬಾಗಿಲು ನಿಮ್ಮ ಒಳ್ಳೆಯ ದಿಕ್ಕಿನಲ್ಲಿ ಇರದಿದ್ದರೆ ನೀವು ಏಳಿಗೆಯನ್ನು ಕಾಣಲು ಅಸಾಧ್ಯ ಅಂತ ಹೇಳಿದೆ. ನಾನು ಹೇಳಿದ ಮಾತು ಅವರಿಗೆ ವಿಚಿತ್ರ ಎನಿಸಿ ತಕ್ಷಣ ತಮ್ಮ ಅನುಭವವನ್ನು ಹೇಳಿಕೊಂಡರು. ನಾನು ಮನೆ ಬಾಡಿಗೆ ಕೊಟ್ಟು ಎಂಟು ವರ್ಷವಾಯಿತು. ಅಲ್ಲಿ ವಾಸಿಸುವವರು 15-20 ಲಕ್ಷ ಹಣ ಮಾಡಿ ಕಾರಿನಲ್ಲಿ ಓಡಾಡುತ್ತಿದ್ದಾರೆ, ಆದರೆ ನಾನು ಮನೆಯ ಮಾಲಿಕ ಈವಾಗಲೂ ಸೈಕಲ್ಲಿನಲ್ಲಿಯೇ ಓಡಾಡುತ್ತಿದ್ದೇನೆ ಎಂದರು.
ಈಗ ನೀವೆ ಯೋಚಿಸಿ ! ಮನೆ ಯಾರದು? ಬಾಡಿಗೆ ಬಂದವರು ಯಾರು? ಲಾಭ ಪಡೆದವರು ಯಾರು? ಅದಕ್ಕಾಗಿಯೇ ನಾನು ಹೇಳುವುದು ಸ್ವಂತ ಮನೆ/ವ್ಯವಹಾರ ಸ್ಥಳ ಇರಲೇಬೇಕೆನ್ನುವ ಮಾತು ಬರುವುದಿಲ್ಲ, ನೀವು ಎಲ್ಲಿರುವಿರೋ ಅಲ್ಲಿಯ ವಾತಾವರಣವನ್ನು ತಿಳಿಗೊಳಿಸಿಕೊಂಡರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ನಾವು ಕೆಲವೊಮ್ಮೆ ವಾಸ್ತು ಮಾಡಲು ಹೋದಾಗ ಕೆಲವರು ಕೇಳುವ ಮಾತು ವಿಚಿತ್ರ ಎನಿಸುತ್ತಿತ್ತು. ನಮ್ಮ ಮನೆಯು ಹೆಂಡತಿಯ ಹೆಸರಿನಲ್ಲಿದೆ. ನಾವು ವಾಸ್ತುವನ್ನು ಅವರ ಹೆಸರಿನಲ್ಲಿ ಮಾಡಿಸಿದ್ದೇವೆ ಎಂದು ಹೇಳುತ್ತಾರೆ. ಆಗ ನಾನು ಅವರಿಗೊಂದು ಪ್ರಶ್ನೆ ಕೇಳಿದೆ ಮಿಸ್ಸೆಸ್ ಹೆಸರಿನಲ್ಲಿ ವಾಸ್ತುವಾಯಿತು, ಹಾಗಾದರೆ ಮಿಸ್ಷರ್ ಏನು ಮಾಡಬೇಕು? ಮಗ ಏನು ಮಾಡಬೇಕು? ಮಗಳು ಏನು ಮಾಡಬೇಕು? ಇವುಗಳಿಗೆ ಯಾರಿಂದಲಾದರೂ ಉತ್ತರಿಸಲು ಸಾಧ್ಯವೇ? ಅಥವಾ ವಾಸ್ತು ಪುರುಷ ಮನೆಯ ಹೊರಗೆ ಕುಳಿತುಕೊಂಡು ಮನೆ ಯಾರ ಹೆಸರಿನಲ್ಲಿ ರಿಜಿಸ್ಟ್ರೇಷನ್ ಇದೆ ಎಂದು ಹೇಳಿ ನಂತರ ಅವರ ಪ್ರಕಾರ ನಾನು ಫಲಿತಾಂಶ ನೀಡುತ್ತೇನೆ ಎಂದು ಹೇಳುತ್ತಾನೆಯೇ? ಇಲ್ಲಾ… ವಾಸ್ತುವಿನ ಪ್ರಭಾವವು ಮನೆಯಲ್ಲಿ ವಾಸಿಸುವವರಲ್ಲಿ ಮನೆಯ ಆಡಳಿತವನ್ನು ಮತ್ತು ಉದ್ಯೋಗವನ್ನು ಯಾರು ಮಾಡುತ್ತಿರುತ್ತಾರೋ ಅವರ ಮೇಲೆ ಅವಲಂಭಿತವಾಗಿರುತ್ತದೆ. ಈಗ ನಿಮಗೆ ಅರ್ಥವಾಗಿರಬಹುದು ವಾಸ್ತುವನ್ನು ಸ್ವಂತ ಮನೆ ಅಷ್ಟೆ ಅಲ್ಲ ಬಾಡಿಗೆ ಮನೆ/ಉದ್ಯೋಗ ಸ್ಥಳಕ್ಕೂ ಸಹಿತ ಅಳವಡಿಸಬಹುದು. ನೀವು ಇನ್ನು ಈ ರೀತಿಯ ಪ್ರಶ್ನೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲವೆಂದು ತಿಳಿದು ನಾನು ಮುಂದಿನ ಅಧ್ಯಾಯಕ್ಕೆ ಹೋಗುತ್ತೇನೆ.








