ಎಲ್ಲರಿಗೂ ವಾಸ್ತು ಅನ್ನುವ ವಿಷಯ ಗೊತ್ತು. ಆದರೆ ಸರಳ ವಾಸ್ತು ಎಂದರೆ ಏನೆನ್ನುವ ವಿಚಾರ ಬರಬಹುದು. ಸರಳ ಇದು ಒಂದು ಸಂಸ್ಕತದ ಶಬ್ದ. ಪ್ರತಿಯೊಂದು ಭಾಷೆಯಲ್ಲೂ ಸರಳ ಎಂದೇ ಉಪಯೋಗಿಸುವರು. ಸರಳ ಎಂದರೆ ಸುಲಭ ಎಂದು ಅರ್ಥ. ಏನೂ ತೊಂದರೆ ಇರಲಾರದ ಹಾಗೆ ಸುಲಭವಾಗಿ ಅಳವಡಿಸಲು ಬರುವ ಒಂದು ವಾಸ್ತು ಕಲೆ. ಅದಕ್ಕಾಗಿ ನಾವು ಇದಕ್ಕೆ ಸರಳ ವಾಸ್ತು ಎಂದು ಹೆಸರಿಸಿದ್ದೇವೆ. ಈ ಸರಳ ವಾಸ್ತುವು ಪ್ರಾಚೀನ ಭಾರತೀಯ ಸಂಸ್ಕೃತಿಯ ಮೇಲೆ ಆಧಾರಿತಗೊಂಡಿದೆ. ಅಲ್ಲದೇ ಸಾವಿರಾರು ವರ್ಷಗಳಿಂದ ನಮ್ಮ ಹಿರಿಯರು ಪಾಲಿಸಿಕೊಂಡು ಬಂದಿದ್ದನ್ನೇ ಇದರಲ್ಲಿ ಅಳವಡಿಸಿಕೊಳ್ಳಲಾಗಿದೆ. ನಾವು ಹೇಳುವ ಒಂದೇ ಮಾತೆಂದರೆ ಹಿರಿಯರು ಪಾಲಿಸಿಕೊಂಡು ಬಂದಂತಹ ಪದ್ಧತಿಗಳನ್ನು ನಾವುಗಳು ಮರೆತು ಇದೇ “30-40 ವರ್ಷಗಳಲ್ಲಿ ಬಂದ ವಾಸ್ತುವಿನ ಬಗ್ಗೆ ತಲೆ ಕೆಡಿಸಿಕೊಂಡು ಲಕ್ಷಗಟ್ಟಲೇ ಹಣವನ್ನು ಕಳೆದುಕೊಂಡು ಕಟ್ಟಡವನ್ನು ಒಡೆಯುವ, ಪದ್ದತಿಗೇ ಸವಾಲಾಗಿ ನಿಂತಿದೆ.” ನಮ್ಮ ಈ ಸರಳ ವಾಸ್ತು.
ಇನ್ನು ಇಂದಿನ ವಾಸ್ತು ಮತ್ತು ಸರಳವಾಸ್ತು ಇವುಗಳಲ್ಲಿ ವ್ಯತ್ಯಾಸ ಏನಿರಬಹುದೆಂದು ಪ್ರತಿಯೊಬ್ಬರಲ್ಲಿಯೂ ಯೋಚನೆ ಬರಬಹುದು. ಇಂದಿನ ವಾಸ್ತು ಹಾಗೂ ಸರಳ ವಾಸ್ತುವಿನಲ್ಲಿ ಕೆಲವೊಂದು ವಿಷಯಗಳಲ್ಲಿ ಸಾಮ್ಯತೆ ಕಂಡು ಬಂದರೂ ಸರಳ ವಾಸ್ತುವಿನ ಸಲಹೆಯು ಮಾತ್ರ ಭಿನ್ನವಾಗಿ ವೈಜ್ಞಾನಿಕವಾಗಿದ್ದು, ಹೆಚ್ಚು ಪರಿಣಾಮಕಾರಿ ಆಗಿರುತ್ತದೆ. ಇದು ಯಾವ ರೀತಿಯಲ್ಲಿ ಭಿನ್ನವಾಗಿರುತ್ತದೆ ಎಂದು ಒಬ್ಬ ಇಂಜಿನೀಯರಾಗಿ ನಾನು ಈ ಪುಸ್ತಕದ ಮೂಲಕ ತಮ್ಮ ಮುಂದೆ ಇಡಲು ಬಯಸುತ್ತಿದ್ದೇನೆ. ನೀವೆಲ್ಲರೂ ಈ ಪುಸ್ತಕವನ್ನು ಓದಿದ ಮೇಲೆ ಯಾವುದು ಎಷ್ಟೊಂದು ವೈಜ್ಞಾನಿಕವಾಗಿದೆ ಎಂದು ತಿರ್ಮಾನಿಸುವುದು ನಿಮ್ಮ ಮೇಲೆ ಬಿಟ್ಟಿದ್ದೇವೆ.
ಇಲ್ಲಿಯವರೆಗೆ ಭಾರತ ದೇಶದ ಪ್ರತಿಯೊಂದೂ ರಾಜ್ಯದ ಪ್ರತಿಯೊಂದು ಭಾಷೆಯಲ್ಲೂ ಸಾಕಷ್ಟು ವಾಸ್ತು ಶಾಸ್ತ್ರದ ಬಗ್ಗೆ ಪುಸ್ತಕಗಳನ್ನು ಬರೆದಿರುತ್ತಾರೆ. ಈ ಎಲ್ಲ ವಾಸ್ತು ಶಾಸ್ತ್ರದ ಬಗ್ಗೆ ಪುಸ್ತಕ ಬರೆದ ವಾಸ್ತು ಪಂಡಿತರಿಗೆ, ಅಲ್ಲದೇ ಇಂದಿನ ದಿನಗಳಲ್ಲಿ ವಾಸ್ತು ಸಲಹೆ ನೀಡುವ ತಜ್ಞರಿಗೆ ಹಾಗೂ ಇಲ್ಲಿಯವರೆಗೆ ಲಕ್ಷಾಂತರ ಹಣವನ್ನು ಕಳೆದುಕೊಂಡ ಜನತೆಗೆ ಹಾಗೂ ಇನ್ನೂ ಕಳೆದುಕೊಳ್ಳುವವರಿಗೆ ಮುಂದೆ ಪ್ರಸ್ಥಾಪಿಸಿರುವ ಅಧ್ಯಾಯಗಳ ಬಗ್ಗೆ ಅವರ ಗಮನವಿರಲಿ ಹಾಗೂ ತಮ್ಮ ಉತ್ತರ ಏನಿದೆ ಎಂಬುದು ಜನರಿಗೆ ತಿಳಿಯಲಿ.








