“ವಾಸ್ತು” ಅನ್ನುವ ಪದ ಪುರಾತನ ಕಾಲದಿಂದ ಬಂದದ್ದು ಅಲ್ಲದೇ ಇದಕ್ಕೆ ವೈಜ್ಞಾನಿಕ ತಳಹದಿ ಇದೆ. ನಮ್ಮ ಹಿರಿಯರು ಅಳವಡಿಸಿಕೊಳ್ಳುವ ಪದ್ಧತಿಗಳು ಇವತ್ತಿಗೂ ಚಾಲನೆಯಲ್ಲಿವೆ. ಆದರೆ ನಾವು ಅವರು ಅನುಸರಿಸುವ ಪದ್ಧತಿಯನ್ನು ಬಿಟ್ಟು ಕಳೆದ 30-40 ವರ್ಷಗಳಲ್ಲಿ ನಮ್ಮದೇ ಆದ ವಾಸ್ತುವನ್ನು ಅನುಸರಿಸುತ್ತಿದ್ದೇವೆ. ಹಾಗಾಗಿ ಈ 30-40 ವರ್ಷಗಳಲ್ಲಿ ಈ ವಾಸ್ತುವಿನ ಪದ ಅತೀ ಪ್ರಚಲಿತವಾಯಿತು. ಇದು ಎಲ್ಲಿಯವರೆಗೆ ಬೆಳೆಯಿತೆಂದರೆ ವಾಸ್ತುವಿರಲಾರದೇ ನಾವು ಏನನ್ನು ಮಾಡಬಾರದು ಅಥವಾ ಕಟ್ಟಬಾರದು ಅನ್ನುವ ಮಟ್ಟಿಗೆ ವಾಸ್ತುವಿನ ಪದ ನಮಗೆ ಭಯ ಹುಟ್ಟಿಸಿ ಬಿಟ್ಟಿತು. ಈ ಭಯವನ್ನು ಹುಟ್ಟಿಸಿದವರ್ಯಾರು ಗೊತ್ತೆ?
ವಾಸ್ತುವಿನಲ್ಲಿ ಸಾಕಷ್ಟು ಪುಸ್ತಕಗಳು ಬಂದಿವೆ. ಅದರಲ್ಲಿ ಸಾಕಷ್ಟು ಜನರು ಇಂಜಿನೀಯರಿಂಗ್ ಜ್ಞಾನವಿಲ್ಲದವರೇ ಇದ್ದಾರೆ. ಅವರಿಗೆ ನಿಜವಾಗಿ ದಿಕ್ಸೂಚಿ ಎಂದರೇನು? ಹಾಗೂ ಅದನ್ನು ನೋಡುವ ಪದ್ಧತಿಯೂ ಸಹ ಗೊತ್ತಿಲ್ಲ. ಇನ್ನು ಇಂಜಿನೀಯರಿಂಗ್ ಜ್ಞಾನ ಇದ್ದವರು ಸಹಿತ ಇದೇ ತಪ್ಪನ್ನೇ ಮಾಡಿರುತ್ತಾರೆ.
ವಾಸ್ತುವಿನ ಮೂಲ ಅರ್ಥವನ್ನು ಬಿಟ್ಟು ತಾವು ಬರೆದ ಪುಸ್ತಕದಲ್ಲಿ ಜನರು ಭಯ ಭೀತರಾಗುವ ಹಾಗೆ ಬರೆದರು, ಅಂದರೆ ವಾಸ್ತು ಪ್ರಕಾರ ಮನೆ ಇರದಿದ್ದರೆ ಆ ಮನೆಯಲ್ಲಿ ಸಾವು ನಿಶ್ಚಿತ ಎನ್ನುವುದನ್ನು ಸಹ ಬರೆದರು. ವಾಸ್ತುವನ್ನು ಸಾವಿಗೆ ಹೋಲಿಸಿದರು. ಮನುಷ್ಯನಿಗೆ ಅಂತಿಮ ಭಯ ಎಂದರೆ ಸಾವು. ಇನ್ನು ಸಾವಿಗಾಗಿ ಪ್ರತಿಯೊಬ್ಬರೂ ಸಹ ಭಯ ಪಡುವರು. ಮನುಷ್ಯ ಇದರಿಂದ ಮತ್ತಷ್ಟು ಭಯಭೀತನಾದ. ಏನೇ ಬರೆಯಲಿ ಅದಕ್ಕೊಂದು ಮಿತಿ ಇದೆ, ಆದರೆ ಆ ಮಿತಿಯನ್ನು ಮೀರಿ ಬರೆದುಕೊಂಡರು.
ಇದೇ 30-40 ವರ್ಷಗಳಲ್ಲಿ ಈ ವಾಸ್ತುವಿನ ಪದ ಮನೆ ಮನೆಗೆ ತಲುಪಿತು, ಅಷ್ಟೆ ಅಲ್ಲ ಮನೆಯಲ್ಲಿರುವ ಒಂದು ಮಗುವಿಗೂ ಸಹಿತ ಈ ವಾಸ್ತು ಎಂದರೆ ಏನು ಎಂಬುದು ಗೊತ್ತಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಒಬ್ಬ ವಾಸ್ತು ಪಂಡಿತರು ಇದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಇವತ್ತಿನ ಪ್ರಚಲಿತ ವಾಸ್ತುವಿನಲ್ಲಿ ಆಗ್ನೇಯಕ್ಕೆ ಅಡುಗೆ ಮನೆ, ಈಶಾನ್ಯಕ್ಕೆ ದೇವರ ಕೋಣೆ, ನೈರುತ್ಯದಲ್ಲಿ ಮನೆ ಯಜಮಾನ ಮಲಗುವ ಕೋಣೆ, ಉತ್ತರ ಅಥವಾ ಪೂರ್ವಕ್ಕೆ ಬಾಗಿಲು ಇರಬೇಕು, ಈಶಾನ್ಯದಲ್ಲಿ ಬಾತ್ರೂಮ್ ಇರಬಾರದು ಈ ರೀತಿಯಲ್ಲಿ ನಿಮ್ಮ ಮನೆಯನ್ನು ಕಟ್ಟಿಸಿದರೆ ಇದು ವಾಸ್ತು ಮನೆ, ಇಲ್ಲದಿದ್ದರೆ ಅದು ವಾಸ್ತು ಮನೆ ಅಲ್ಲ ಎಂದು ಬರೆದರು.
30-40 ವರ್ಷಗಳ ಹಿಂದೆ ನಮ್ಮ ಹಿರಿಯರು ಕಟ್ಟಿಸಿದ ಮನೆಗಳು ಆಗ್ನೇಯಕ್ಕೆ ಅಡುಗೆ ಮನೆ, ಈಶಾನ್ಯದಲ್ಲಿ ದೇವರ ಕೋಣೆ ಪೂರ್ವಕ್ಕೆ ಅಥವಾ ಉತ್ತರಕ್ಕೆ ಬಾಗಿಲು ಮುಂತಾದವುಗಳು, ಈ ರೀತಿಯಾಗಿ ಪ್ರತಿಶತ 90% ರಷ್ಟು ಹಿಂದಿನ ಮನೆಗಳು ಪ್ರಚಲಿತ ವಾಸ್ತು ಪುಸ್ತಕದಲ್ಲಿ ಬರೆದ ರೀತಿಯಲ್ಲಿ ಇಲ್ಲ ಎನ್ನುವುದು ತಮಗೆ ತಿಳಿದಿರಲಿ. ಹಾಗೆಂದು ಅವರೆಲ್ಲರೂ ಸುಖದಿಂದ ಇರಲಿಲ್ಲವೇ? ಇದನ್ನು ಯಾರೂ ಹೇಳಬೇಕಿಲ್ಲ, ಸ್ವಲ್ಪ ವಿಚಾರ ಮಾಡಿದರೆ ಸ್ಪಷ್ಟ ಚಿತ್ರಣ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ.
ನಮ್ಮ ಹಿರಿಯರು 70-80 ವರ್ಷ ವಯಸ್ಸಾದರೂ ಅವರಿಗೆ ಸಕ್ಕರೆ ಕಾಯಿಲೆ, ರಕ್ತದ ಒತ್ತಡ ಇವೂ ಸಹ ಗೊತ್ತಿರಲಿಲ್ಲ. ಅದೇ ಈಗ ನಾವುಗಳು 20-30ನೇ ವರ್ಷ ವಯಸ್ಸಿನಲ್ಲಿ ನಮಗೆ ಚಹಾದಲ್ಲಿ ಸಕ್ಕರೆ ಬೇಡ ಅನ್ನುವ ಮಟ್ಟಿಗೆ ಬಂದಿದ್ದೇವೆ. ನೀವೇ ವಿಚಾರ ಮಾಡಿ? ನಮ್ಮ ಹಿರಿಯರು ಸುಖದಿಂದ ಇದ್ದರೋ ಅಥವಾ 30-40 ವರ್ಷಗಳಲ್ಲಿ ಪ್ರಚಲಿತ ವಾಸ್ತುವನ್ನು ಅಳವಡಿಸಿಕೊಂಡ ನಾವು ಸುಖದಿಂದ ಇದ್ದೇವೆಯೋ ಹೇಗೆ ಎಂದು?
ಹಾಗಾದರೆ ನಿಜವಾಗಿ ವಾಸ್ತು ಅಂದರೆ ಏನು? “ಮನುಷ್ಯನು ವಾತಾವರಣದ ಜೊತೆ ಸಾಮರಸ್ಯವಾಗಿ ಬದುಕುವ ಒಂದು ಕಲೆ“. ಇದು ಯಾರ ಹುಟ್ಟು ಸಾವಿಗೂ ಸಂಬಂಧ ಪಟ್ಟಿಲ್ಲ, ಅಲ್ಲದೇ ಯಾವುದೇ ಜಾತಿ ಧರ್ಮಕ್ಕೆ ಸಂಬಂಧ ಪಟ್ಟಿಲ್ಲ, ಇನ್ನೊಂದು ವಿಶೇಷವೆಂದರೆ ಇದಕ್ಕೆ ಸ್ವಂತ ಮನೆ / ಸ್ವಂತ ಉದ್ಯೋಗ ಸ್ಥಳ ಇರಬೇಕಾಗಿಲ್ಲ, ಬಾಡಿಗೆಯಲ್ಲಿ ಇದ್ದರೂ ಅಲ್ಲಿಯೂ ಸಹಿತ ವಾಸ್ತುವನ್ನು ಅಳವಡಿಸಿಕೊಳ್ಳಬಹುದು.
ನಿಜವಾಗಿಯೂ ಈಗ ಪ್ರತಿಯೊಬ್ಬರೂ ವಿಚಾರ ಮಾಡುವ ಕಾಲ ಬಂದಿದೆ. ಇಲ್ಲಿಯವರೆಗೆ ದೇಶದ ಹಲವಾರು ಭಾಷೆಗಳಲ್ಲಿ ಬರೆದ ವಾಸ್ತು ಪುಸ್ತಕಗಳು ಜನರನ್ನು ತಪ್ಪು ದಾರಿಗೆ ಎಳೆದಿವೆ. ಅಲ್ಲದೇ ವಾಸ್ತುವಿನ ಹೆಸರಿನಲ್ಲಿ ಬಹಳಷ್ಟು ಹಣವನ್ನು ಕಳೆದುಕೊಂಡವರು ಇದ್ದಾರೆ. ಇವರುಗಳು ಮಾಡಿದ ತಪ್ಪುಗಳು ಯಾವವು ಎಂಬುವುದನ್ನು ಮುಂದಿನ ಅಧ್ಯಾಯದಲ್ಲಿ ವಿವರಿಸುತ್ತೇನೆ.








