ಹಬ್ಬ ಹರಿದಿನಗಳು ಯಾವಾಗಲೂ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಆಚರಣೆಯಲ್ಲಿ ತರಲು ಮೂಲಭೂತವಾಗಿ ಕಾರಣವಾಗಿವೆ. ಇವುಗಳಿಂದಾಗಿಯೇ ನಾವು ನಮ್ಮ ಸಂಸ್ಕೃತಿಯನ್ನು ಜೀವಂತವಾಗಿರಿಸಲು ಸಾಧ್ಯವಾಗಿವೆ. ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವೈಚಾರಿಕತೆಯ, ವೈಶಿಷ್ಠತೆ ಇರುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಎಲ್ಲಕ್ಕಿಂತ ದೊಡ್ಡ ಹಬ್ಬವೆಂದು ದೀಪಾವಳಿಯನ್ನು ಆಚರಿಸುತ್ತಾರೆ. ಹಾಗೂ ಇದನ್ನು ಸ್ವಾಭಾವಿಕವಾಗಿ ದೇಶದೆಲ್ಲೆಡೆ ಆಚರಿಸುವ ಸಂಪ್ರದಾಯವಿದೆ.
ನಮ್ಮ ಸರಳ ವಾಸ್ತುವಿನಲ್ಲೂ ಈ ಹಬ್ಬಕ್ಕೆ ನಾವು ವಿಶೇಷ ಪ್ರಾಮುಖ್ಯತೆಯನ್ನು ನೀಡಿರುತ್ತೇವೆ. ಈ ಹಬ್ಬದ ಮೂಲ ಉದ್ದೇಶವೆಂದರೆ ಮನೆಯಲ್ಲಿ ಬೇಡವಾದ ಹಳೆಯ ವಸ್ತುಗಳನ್ನು ಮನೆಯಿಂದ ತೆಗೆಯಿರಿ ಮನೆಗೆ ಹೊಸ ಸುಣ್ಣ ಬಣ್ಣವನ್ನು ಹಚ್ಚಿಸಿ ನೀವು ಹಾಗೂ ಕುಟುಂಬದವರು ಸಹಿತ ಹೊಸ ಬಟ್ಟೆಯನ್ನು ಧರಿಸಿ ಹೊಸ ಉತ್ಸಾಹದಿಂದ ಜೀವನ ಪ್ರಾರಂಭಿಸಿ. ಹಳೆಯ ವಸ್ತುಗಳು ಹಾಗೂ ಬೇಡವಾದ ಸರಕು ಸಾಮಗ್ರಿಗಳು, ರದ್ದಿ ಪೇಪರ್ಗಳು ಮನೆಯಲ್ಲಿ ಶಾಂತಿ, ಸಮಾಧಾನ, ನೆಮ್ಮದಿ, ಪ್ರಗತಿಗೆ ಮಾರಕವಾಗುತ್ತವೆ.
ಈ ಉದ್ದೇಶದಿಂದಲೇ ಮನೆಯಲ್ಲಿರುವ ಹಳೆಯ ವಸ್ತುಗಳನ್ನು ಮನೆಯಿಂದ ಹೊರಹಾಕುವ ಮೂಲಕ ಋಣಾತ್ಮಕ ಶಕ್ತಿಯನ್ನು ಕಡಿಮೆಗೊಳಸಿ ಜೀವನವು ಪ್ರಗತಿಯತ್ತ ಸಾಗಿಸಲು ಅನುವು ಮಾಡಿಕೊಡುವುದೇ ಆಗಿದೆ. ಮನೆಗೆ ಹೊಸ ಸುಣ್ಣ–ಬಣ್ಣ ಹಚ್ಚುವುದರಿಂದ ಹಾಗೂ ಮನೆ ಸ್ವಚ್ಛಗೊಳಿಸುವುದರಿಂದ ಮನೆಯಲ್ಲಿರುವ ಋಣಾತ್ಮಕ ಶಕ್ತಿಗಳೆಲ್ಲವು ತೊಲಗಿ ಧನಾತ್ಮಕ ಶಕ್ತಿಯು ಬರಲು ಅನುಕೂಲವಾಗುತ್ತದೆ. ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಅತೀ ಹೆಚ್ಚಿನ ರೀತಿಯಲ್ಲಿ ಹೂವುಗಳನ್ನು ತರಿಸಿ, ದೇವರಿಗೆ ಅಲಂಕರಿಸಿ ಪೂಜೆಯನ್ನು ಮಾಡುತ್ತಾರೆ. ಇಲ್ಲಿ ಹೆಚ್ಚು ಹೂವುಗಳಿಂದ ದೇವರನ್ನು ಅಲಂಕರಿಸುವ ಮೂಲಕ ಅಧಿಕ ಪ್ರಮಾಣದಲ್ಲಿ ಧನಾತ್ಮಕ ಶಕ್ತಿಯನ್ನು ಬರಮಾಡಿಕೊಳ್ಳಲು ಅನುವು ಮಾಡಿಕೊಟ್ಟಂತಾಗುತ್ತದೆ.
ಹಿರಿಯರು ಹೇಳಿಕೊಂಡು ಬಂದಂತಹ ಒಂದು ಮಾತನ್ನು ನೀವು ನೆನೆಸಿಕೊಂಡರೆ ಸಾಕು. “ಮನೆಯ ಎದುರಿನಲ್ಲಿ ರಂಗೋಲಿಯನ್ನು ಹಾಕಿರಿ. ದೀಪ ಹಚ್ಚಿ ಇಡಿ, ಲಕ್ಷ್ಮಿ ಬರುತ್ತಾಳೆ” ಎಂದು ಹೇಳುತ್ತೀರುತ್ತಾರೆ. ಈ ಮಾತು ಎಷ್ಟೊಂದು ಅರ್ಥಗರ್ಭೀತವಾಗಿದೆ ಎಂದು ಸ್ವಲ್ಪ ಯೋಚಿಸಿದರೆ ಸಾಕು. ನಿಮಗೂ ಕೂಡ ಅದರ ಅರ್ಥ ತಿಳಿಯುತ್ತದೆ. ಇಲ್ಲಿ ಲಕ್ಷ್ಮಿ ಬರುತ್ತಾಳೆಂದರೆ ಏನು ಅರ್ಥ….? ಲಕ್ಷ್ಮಿ ಎಂದರೆ ಹಣವಲ್ಲ. ನಮ್ಮ ಹಿರಿಯರು ಯಾವಾಗಲೂ ಧನಾತ್ಮಕ ಶಕ್ತಿಗೆ ಲಕ್ಷ್ಮಿ ಎಂತಲೂ ಋಣಾತ್ಮಕ ಶಕ್ತಿಗೆ ದೃಷ್ಠಿ ಎಂದೂ ಕರೆಯುತ್ತಿದ್ದರು. ಇನ್ನು ರಂಗೋಲಿ ಹಾಕಿ ದೀಪ ಹಚ್ಚಿಡುವ ಮೂಲಕ ಲಕ್ಷ್ಮಿ ಬರುತ್ತಾಳೆ ಎಂದರೆ ಧನಾತ್ಮಕ ಶಕ್ತಿಯು ನಿಮ್ಮ ಸುಖ, ಶಾಂತಿ, ಸಮಾಧಾನ, ನೆಮ್ಮದಿಯ ದೇಗುಲವಾಗುವುದು. ಇದುವೇ ದೀಪಾವಳಿಯನ್ನು ಸಾಂಕೇತಿಸುವ ನಿಜವಾದ ಅರ್ಥ.
ನಮ್ಮ ಹಿರಿಯರು ಹೇಳುವ ಇನ್ನೊಂದು ಮಾತೆಂದರೆ “ಸಂಜೆಯಾಯಿತು ಮನೆಯಲ್ಲಿ ದೀಪವನ್ನು ಹಚ್ಚಿರಿ” ಈ ವಾಕ್ಯದ ಮಹತ್ವವೆಂದರೆ ಕತ್ತಲಾದಾಗ ಮನೆಯಲ್ಲಿ ಋಣಾತ್ಮಕ ಶಕ್ತಿಯು ಅಧಿಕವಾಗುವುದು. ಬೆಳಕನ್ನು ಹಚ್ಚುವ ಮೂಲಕ ಧನಾತ್ಮಕ ಶಕ್ತಿಯನ್ನು ಬರಮಾಡಿಕೊಂಡು ಋಣಾತ್ಮಕ ಶಕ್ತಿಯನ್ನು ಮನೆಯಿಂದ ಹೊರದೂಡುವುದು.
ಕತ್ತಲನ್ನು ಓಡಿಸುವ ಮೂಲಕ ಬೆಳಕಿನ ವಿಜಯವನ್ನು ಸಾರುವ ಈ ಹಬ್ಬದಂತೆಯೆ ಸರಳ ವಾಸ್ತುವು ಪ್ರಚಲಿತ ವಾಸ್ತುವಿನ ವಿಷಯದಲ್ಲಿರುವ ಅಜ್ಞಾನ, ಅಂಧಕಾರವನ್ನು ತೆಗೆದು ವೈಜ್ಞಾನಿಕತೆಯ ಆಧಾರವೆಂಬ ಬೆಳಕಿನ ಮೂಲಕ ಜನ ಜೀವನ ಬೆಳಗಿಸುವುದರಲ್ಲಿ ಯಾವುದೇ ಸಂಶಯವಿಲ್ಲ.








