ಈ ವಿಷಯದ ಬಗ್ಗೆ ಪ್ರತಿಯೊಂದು ಪ್ರಚಲಿತ ವಾಸ್ತು ಪುಸ್ತಕದಲ್ಲಿ “ಈಶಾನ್ಯದಲ್ಲಿ ಭಾರವಿದ್ದರೆ ಕುಟುಂಬದಲ್ಲಿ ಅತೀ ತೊಂದರೆಯು ಉಂಟಾಗುತ್ತದೆ” ಎಂದು ಬರೆದಿರುತ್ತಾರೆ. ಏಕೆ ಭಾರವಿರಬಾರದು? ಎಂದು ಕೇಳಿದರೆ ಇವರು ಕೊಡುವ ಕಾರಣವಿಷ್ಟೆ. ವಾಸ್ತು ಪುರುಷನ ತಲೆಯು ಈಶಾನ್ಯದ ಭಾಗದಲ್ಲಿರುವುದು. ಅಲ್ಲಿ ಭಾರವಿದ್ದರೆ ವಾಸ್ತು ಪುರುಷನ ತಲೆಯ ಮೇಲೆಯೇ ಭಾರ ಬೀಳುತ್ತದೆ. ತಲೆಯ ಮೆಲೆ ಭಾರ ಬಿದ್ದಾಗ ವಾಸ್ತು ಪುರುಷನ ಕೋಪಕ್ಕೆ ನಾವು ತುತ್ತಾಗಿ ಅವನು ನಮಗೆ ತೊಂದರೆ ಕೊಡುತ್ತಾನೆ ಎಂಬುದು ಇವರ ವಾದ. ಇನ್ನು ನಾವು ಈ ಎಲ್ಲ ಮಾತನ್ನು ನಂಬುತ್ತೇವೆಂದರೆ ನಮ್ಮಂತ ಮೂರ್ಖರು ಬೇರೆ ಯಾರು ಇಲ್ಲ. ಇಲ್ಲಿ ಒಂದು ಉದಾಹರಣೆಯನ್ನು ನಾನು ನಿಮಗೆ ಕೊಡಬಲ್ಲೆ.
ಹುಬ್ಬಳ್ಳಿಯ ಓರ್ವ ವ್ಯಕ್ತಿ ಸಿನಿಮಾ ಟಾಕೀಸಿನ ಮಾಲಿಕರು ಹಾಗೂ ಶ್ರೀಮಂತ ವ್ಯಕ್ತಿ. ಅವರು ಆರು ವರ್ಷಗಳ ಹಿಂದೆ ಸರಳ ವಾಸ್ತು ಸೇವೆಯನ್ನು ಪಡೆಯಲು ಇಚ್ಛಿಸಿ, ಮನೆಗೆ ನಮ್ಮನ್ನು ಕರೆಯಿಸಿದ್ದರು ನಾವು ಆ ಮನೆಯಲ್ಲಿ ಕೆಲವೊಂದು ಸಣ್ಣ ಪುಟ್ಟ ಮಾರ್ಪಾಡುಗಳನ್ನು ಮಾಡಲು ತಿಳಿಸಿದೆವು. ಆಗ ಅವರು ಈಶಾನ್ಯದಲ್ಲಿರುವ ಮೆಟ್ಟಿಲುಗಳ ಬಗ್ಗೆ ಕೇಳಿದರು. ನಾನು ಅದರಲ್ಲೇನು ತೊಂದರೆ ಇಲ್ಲ
ಎಂದು ತಿಳಿಸಿದೆ. ಆಗ ಅವರು ಈಗಾಗಲೇ ಸುಮಾರು 10-15 ಜನ ವಾಸ್ತು ಪಂಡಿತರನ್ನು ಕೇಳಿದಾಗ ಪ್ರತಿಯೊಬ್ಬರೂ “ಈಶಾನ್ಯದ ಈ ಮೆಟ್ಟಿಲುಗಳನ್ನು ಒಡೆದು ತೆಗೆಯಿರಿ ಹಾಗಿದ್ದಾಗ ಮಾತ್ರ ನಿಮ್ಮ ಮನೆಯಲ್ಲಿ ನಿಮಗೆ ಶಾಂತಿ ಸಿಗುವುದು ಎಂದು” ಹೇಳಿದ್ದಾರೆ. ಆದರೆ ನೀವು ಹೇಳುತ್ತೀದ್ದೀರಿ ಅದರಲ್ಲೇನೂ ತೊಂದರೆ ಇಲ್ಲ ಎಂದು ನನಗೆ ಆಶ್ಚರ್ಯವಾಗುತ್ತಿದೆ ಎಂದರು. ಆಗ ಅಲ್ಲಿಯೇ ನಿಂತಿದ್ದ ಅವರ ತಾಯಿಯವರು ನನಗೆ ಕೈ ಮುಗಿದು “ನಲವತ್ತು ವರ್ಷಗಳ ಹಿಂದೆ ನನ್ನ ಗಂಡ ಕಟ್ಟಿಸಿದ ಮನೆ ಇದು. ಇವತ್ತು ನನ್ನ ಮಕ್ಕಳು ಒಡೆಯಲು ಹೊರಟಿದ್ದಾರೆ. ಯಾರೇ ವಾಸ್ತು ತಜ್ಞರು ಬಂದರೂ ಒಡೆಯಲು ಹೇಳಿದ್ದಾರೆ ಆದರೆ ನೀವೊಬ್ಬರೇ ಒಡೆಯಬೇಡಿ ಎಂದು ಹೇಳಿದಿರಿ. ಅದಕ್ಕೆ ನನಗೆ ಸಂತೋಷ ಎನಿಸಿ ಕೈ ಮುಗಿದಿದ್ದೇನೆ” ಎಂದರು. ಆ ಕ್ಷಣವೇ ನಾನು ಅಲ್ಲೇ ನಿಂತಿದ್ದ ಅವರ ಮಗನಿಗೆ ಹೇಳಿದೆ ರೀ ಮಹನಿಯರೇ, ನಾನು ಒಬ್ಬ ಸಿವಿಲ್ ಇಂಜಿನೀಯರ ಅಲ್ಲದೇ ನೀವೂ ಸಹ ಒಬ್ಬ ಇಂಜಿನೀಯರ. ಒಬ್ಬ ಕಲಿತ ವ್ಯಕ್ತಿಯಾಗಿ ನೀವು ವಿಧ್ಯಾವಂತರಂತೆ ಮಾತನಾಡಿ ಅದನ್ನು ಬಿಟ್ಟು ಅವಿಧ್ಯಾವಂತರ ಹಾಗೆ ಮಾತನಾಡಬೇಡಿ. ಯಾರೇ ವಾಸ್ತು ಪಂಡಿತರು ಬರೆದಿದ್ದಾರೆಂದು ಕಣ್ಣು ಮುಚ್ಚಿ ಒಪ್ಪಿಕೊಳ್ಳುತ್ತೇವೆಂದರೆ ಏನರ್ಥ? ನಾನು ನಿಮಗೆ ಕೆಲವೊಂದು ಪ್ರಶ್ನೆ ಕೇಳುತ್ತೇನೆ ಅದಕ್ಕೆ ಉತ್ತರ ನೀಡಿ ಎಂದೆನು.
ನಿಮ್ಮ ತಂದೆಯವರು ಈ ಮನೆಯನ್ನು ಕಟ್ಟಿಸಿದಾಗ ನಿಮ್ಮ ಸಿನಿಮಾ ಟಾಕೀಸುಗಳು ಎಷ್ಟಿದ್ದವು? ಅದಕ್ಕೆ ಅವರು “ಒಂದು” ಎಂದು ಹೇಳಿದರು. ಈಗ ಎಷ್ಟಿದೆ ಎಂದು ಕೇಳಿದಾಗ “ಒಂಬತ್ತು ಸಿನಿಮಾ ಟಾಕೀಸುಗಳಿವೆ” ಎಂದು ಹೇಳಿದರು. ಮನೆಯಲ್ಲಿ ಈಶಾನ್ಯದಲ್ಲಿ ಭಾರವಾಗಿತ್ತು ಎಂದರೆ ನಿಮ್ಮ ತಂದೆಯವರು ಇದ್ದ ಒಂದು ಟಾಕೀಸನ್ನು ಮಾರಿಕೊಳ್ಳಬೇಕಾಗಿತ್ತು. ಅದನ್ನು ಬಿಟ್ಟು ಈಗ ಒಂಬತ್ತು ಸಿನಿಮಾ ಟಾಕೀಸು ಹೇಗಾದವು? ಇದಕ್ಕೆ ನಿಮ್ಮ ಉತ್ತರವೇನು ಎಂದು ಕೇಳಿದೆ. ಅವರು ಆಗ ಸ್ವಲ್ಪ ಹೊತ್ತು ಸುಮ್ಮನೆ ಕುಳಿತುಕೊಂಡರು. ಆಮೇಲೆ ನನ್ನ ಮಾತನ್ನು ಸರಿ ಎಂದು ಒಪ್ಪಿಕೊಂಡರು. ಮುಂದೆ ಮೆಟ್ಟಿಲುಗಳನ್ನು ತೆಗೆಯಲಾರದ ಹಾಗೆ ಸರಳವಾದ ಉಪಾಯಗಳನ್ನು ಹೇಳಿದೆವು. ಕೆಲವೇ ದಿನಗಳಲ್ಲಿ ಫಲಿತಾಂಶ ಕಂಡ ಅವರು ಸಿನೀಮಾ ಟಾಕೀಸಿಗೂ ಸಹ ಸರಳ ವಾಸ್ತು ಸೇವೆಯನ್ನು ಅಳವಡಿಸಿಕೊಂಡರು. ನಾನು ತಮಗೆ ಹೇಳುವುದಿಷ್ಟೆ ಯಾವುದನ್ನೂ ಸುಮ್ಮನೆ ನಂಬಬೇಡಿರಿ ಅದು ಎಷ್ಟೊಂದು ನಿಜ ಅಥವಾ ಎಷ್ಟೊಂದು ವೈಜ್ಞಾನಿಕವಾಗಿದೆ ಎಂದು ವಿಚಾರಿಸಿ ಮುಂದಿನ ಕಾರ್ಯ ಕೈಗೊಳ್ಳಿ. ಸರಳ ವಾಸ್ತುವಿನಲ್ಲಿ ಮನೆಯ ನಡುವಿನ ಭಾಗದಲ್ಲಿ ಮೆಟ್ಟಿಲುಗಳು ಬರಬಾರದು ಎಂದು ಹೇಳುತ್ತೇವೆ. ಏಕೆ ಎಂದು ನೀವು ಪ್ರಶ್ನಿಸಿದರೆ, ಶಕ್ತಿ (Energy) ಎನ್ನುವುದು ಮನೆಯಲ್ಲಿ ಹರಿದಾಡುವಾಗ ಮನೆಯ ಮಧ್ಯ ಭಾಗದಲ್ಲಿ ಮೆಟ್ಟಿಲುಗಳು ಬಂದರೆ ಅದಕ್ಕೆ ಬಡಿದು ಶಕ್ತಿಯ ಹರಡುವಿಕೆಯಲ್ಲಿ ತೊಂದರೆ ಉಂಟಾಗುತ್ತದೆ. ಆಗ ಮನೆಯು ಅಶಾಂತಿಯ ಮನೆಯಾಗುವುದು. ಇದಕ್ಕಾಗಿ ಮನೆಯ ಮಧ್ಯ ಭಾಗದಲ್ಲಿ ಮಾತ್ರ ಭಾರ ಬೇಡ. ಇದನ್ನು ಬಿಟ್ಟು ಬೇರೆ ಯಾವುದೇ ದಿಕ್ಕಿನಲ್ಲಿ ಭಾರವಿದ್ದರೆ ಏನೂ ತೊಂದರೆ ಇಲ್ಲ ಎಂದು ತಮಗೆ ತಿಳಿಸಲು ಇಚ್ಛಿಸುತ್ತೇನೆ.








