ಈ ಮೇಲಿನ ವಿಷಯದ ಬಗ್ಗೆ ನಾನು ಏನು ಹೇಳಬೇಕೋ ಅಥವಾ ಏನು ಬರೆಯಬೇಕೋ ಎಂಬ ಗೊಂದಲದಲ್ಲಿದ್ದೇನೆ, ಕಾರಣವಿಷ್ಟೆ, ದೇಶಾದ್ಯಂತ, ಪ್ರತಿಯೊಂದು ರಾಜ್ಯಗಳಲ್ಲಿಯ ಪ್ರತಿಯೊಂದು ಭಾಷೆಯಲ್ಲಿ ವಾಸ್ತು ಪಂಡಿತರು ತಾವು ಬರೆದ ವಾಸ್ತು ಪುಸ್ತಕಗಳಲ್ಲಿ ಭಾರತವು ವಾಸ್ತುವಿಗೆ ಅನುಗುಣವಾಗಿಲ್ಲ ಅಥವಾ ಭಾರತ ದೇಶದ ವಾಸ್ತುವೇ ಸರಿಯಿಲ್ಲವೆಂದು ಬರೆದಿರುತ್ತಾರೆ. ಭಾರತದ ಬಗ್ಗೆ ಅಭಿಮಾನವಿರುವ ಪ್ರಜೆಯಾಗಿ, ಓರ್ವ ಇಂಜಿನೀಯರಾಗಿ, ಸರಳ ವಾಸ್ತು ತಜ್ಞನಾಗಿ ಭಾರತ ದೇಶವು ವಾಸ್ತುವಿಗೆ ಅನುಗುಣವಾಗಿ ಇದೆ ಎನ್ನುವ ವಾದ ಮಂಡಿಸುವುದರಲ್ಲಿ ನಾನೊಬ್ಬನೆ ಏಕೈಕ ವ್ಯಕ್ತಿ ಎಂದರೂ ಅತೀಶಯೋಕ್ತಿಯಲ್ಲ.
ಇನ್ನು ವಾಸ್ತು ಪುಸ್ತಕಗಳನ್ನು ಬರೆದ ಪಂಡಿತರಂತೆ ಹೋದರೆ ಭಾರತ ದೇಶವು ವಾಸ್ತುವಿಗೆ ಅನುಗುಣವಾಗಿಲ್ಲ ಇದಕ್ಕಾಗಿ ಅವರು ಕೆಳಗಿನಂತೆ ಕಾರಣಗಳನ್ನು ನೀಡಿರುತ್ತಾರೆ.
1. ಯಾವುದೇ ದೇಶದ ಈಶಾನ್ಯ ಭಾಗವು ಎತ್ತರವಾಗಿರಬಾರದು. ಆದರೆ ಭಾರತದ ಈಶಾನ್ಯ ಭಾಗದಲ್ಲಿ ಹಿಮಾಲಯ ಪರ್ವತವು ಬಂದಿರುವುದು.
2. ಈಶಾನ್ಯ ಭಾಗವು ತುಂಡಾಗಿರುವುದು.
3. ದಕ್ಷಿಣ ಭಾಗದಲ್ಲಿ ನೀರು ಇರಬಾರದು.
4. ದಕ್ಷಿಣ ಭಾಗವು ವಿಸ್ತಾರದಲ್ಲಿ ಕಡಿಮೆಯಾಗುತ್ತ ಹೋಗಬಾರದು.
ಮೇಲೆ ಕಾಣಿಸಿದ ಕಾರಣಗಳನ್ನು ತಿಳಿಸುತ್ತ ಭಾರತವು ವಾಸ್ತುವಿಗೆ ಅನುಕೂಲವಾಗಿಲ್ಲ. ಭಾರತದಲ್ಲಿ ರೋಗರುಜೀನಗಳು ಜಾಸ್ತಿ, ಅಪಘಾತ–ಅವಘಡಗಳು ಹೆಚ್ಚು, ಅಂತಃಕಲಹಗಳು ಹೆಚ್ಚು ಇದರಿಂದಾಗಿ ದೇಶವು ಸಮೃದ್ಧಿಯಾಗಲು ಸಾಧ್ಯವಿಲ್ಲವೆಂದು ಬರೆದಿದ್ದಾರೆ. ಈ ಪ್ರಶ್ನೆಗಳಿಗೆಲ್ಲ ಉತ್ತರಿಸುವ ಮೊದಲು ವಾಸ್ತು ಪುಸ್ತಕಗಳನ್ನು ಬರೆದ ಪ್ರಕಾಂಡ ಪಂಡಿತರಲ್ಲಿ, ತಜ್ಞರಲ್ಲಿ ಕೆಳಗೆ ಕಾಣಿಸಿರುವ ಪ್ರಶ್ನೆಗಳನ್ನು ಕೇಳಬಯಸುತ್ತೇನೆ.
1. ಅನಾದಿ ಕಾಲದಿಂದಲೂ ಭಾರತ ದೇಶ ಸಮೃದ್ಧಿ, ಸಂಪತ್ಬರಿತ ರಾಷ್ಟ್ರವಾಗಿತ್ತೋಇಲ್ಲವೋ…?
2. ನಮ್ಮ ದೇಶವು ಎಷ್ಟೊಂದು ಸಂಪತ್ಬರಿತವಾಗಿತ್ತೆಂದರೆ ಪರ ರಾಷ್ಟ್ರದವರು ಸಾಕಷ್ಟು ಸಲ ದಂಡೆತ್ತಿ ಬಂದು ಸಂಪತ್ತನ್ನು ದೋಚಿಕೊಂಡು ಹೋಗಿರುವ ಬಗ್ಗೆ ತಿಳಿದಿಲ್ಲವೇ…?
3. ಭಾರತ ಕೇವಲ ಒಂದು ರಾಜ್ಯವಾದ ಕರ್ನಾಟಕದ ಹಂಪೆಯಲ್ಲಿ ಬಂಗಾರ (Gold)ವನ್ನು ಸೇರಿನಿಂದ ಅಳೆದು ವಜ್ರ ವೈಡೂರ್ಯಗಳನ್ನು ರಸ್ತೆಗಳಲ್ಲಿ ಮಾರುತ್ತಿದ್ದರು ಎಂಬುದಾಗಿ ವಿದೇಶಿ ಪ್ರವಾಸಿಗರು ಪ್ರವಾಸಿ ಕಥನಗಳಲ್ಲಿ ಬರೆ ದಿರುವುದನ್ನು ಓದಿಲ್ಲವೇ…?
4. ಬ್ರಿಟೀಷರು ಭಾರತಕ್ಕೆ ಬಂದು ದೇಶವನ್ನು ಗುಲಾಮಗಿರಿಗೆ ತಳ್ಳಿ, ದೇಶದ ಸರ್ವ ಸಂಪತ್ತನ್ನು ಲೂಟಿ ಮಾಡಿದರೂ ಸಹಿತ ಇಂದಿನ ದಿನಗಳಲ್ಲಿ ಭಾರತವು ಜಾಗತೀಕವಾಗಿ ಯಾವ ಸ್ಥಾನದಲ್ಲಿದೆ ಎಂಬುದರ ಬಗ್ಗೆ ಅರಿವಿಲ್ಲವೇ…?
5. 1947 ರಲ್ಲಿ ಭಾರತವು ಸ್ವಾತಂತ್ರ್ಯವಾದಾಗ ಅದೇ ಸಮಯದಲ್ಲಿ ಪಕ್ಕದ ಪಾಕಿಸ್ತಾನವು ಸ್ವತಂತ್ರ್ಯ ದೇಶವಾಗಿ ಉದಯಿಸಿತು. ಸ್ವತಂತ್ರ್ಯದ ನಂತರದ ಈ 69 ವರ್ಷಗಳಲ್ಲಿ ನಾವು ಯಾವ ಸ್ಥಾನವನ್ನು ಮುಟ್ಟಿದ್ದೇವೆ…? ನೆರೆ ದೇಶವು ಯಾವ ಸ್ಥಾನದಲ್ಲಿದೆ ಎಂಬುದನ್ನು ಹೇಳುವ ಅವಶ್ಯಕತೆ ಇದೆಯೇ?
6 ಪೋಖ್ರಾನ್ನಲ್ಲಿ ಅಣು ಶಕ್ತಿ ಪ್ರಯೋಗ ನಡೆಸಿದಾಗ ಜಾಗತೀಕ ವಲಯದಲ್ಲಿರುವ ಕೆಲವು ಬಲಿಷ್ಠ ದೇಶಗಳು ದಿಗ್ಬಂಧನ ಹೇರಿದಾಗ ಭಾರತಕ್ಕೆ ಏನಾದರೂ ಕೊರತೆ ಉಂಟಾಯಿತೇ? ಮುಂದೆ ಕೆಲವು ವರ್ಷಗಳಲ್ಲಿ ಆ ಎಲ್ಲ ದೇಶಗಳು ಯಾವುದೇ ಕರಾರು ಇಲ್ಲದೆ ದಿಗ್ಬಂದನ ವಾಪಸ್ ಪಡೆದಿರುವ ಬಗ್ಗೆ ತಮಗೆ ತಿಳಿದಿಲ್ಲವೇ…?
7. ಪರಮಾಣು ಶಕ್ತಿ ಹೊಂದಿರುವ ಆರು ರಾಷ್ಟ್ರಗಳಲ್ಲಿ ಭಾರತವೂ ಒಂದು ಎಂದು ನಿಮಗೆ ಗೊತ್ತಿದೆಯೇ…?
8. ಅರವತ್ತು ಸಾವಿರ ಕೋಟಿ ರೂಪಾಯಿಗಳ ರಸ್ತೆ ನಿರ್ಮಾಣ ಕಾಮಗಾರಿಯನ್ನು ಏಕ ಕಾಲದಲ್ಲಿ ತೆಗೆದುಕೊಂಡ ಏಕೈಕ ರಾಷ್ಟ್ರ
ಭಾರತ. ಎಂದು ನಿಮಗೆ ಗೊತ್ತಿಲ್ಲವೇ…?
9 Mercedeze Benz Ford Honda ಕಾರುಗಳು ಭಾರತದಲ್ಲಿ ಮೊದಲು ಸಿಗುತ್ತಿರಲಿಲ್ಲ, ಈಗ ಅದೇ ಕಾರುಗಳು ಭಾರತದಲ್ಲಿ ತಯಾರಾಗಿ ಹೊರ ದೇಶಗಳಲ್ಲಿ ಮಾರಲ್ಪಡುವುದು ನಿಮಗೆ ಗೊತ್ತಿದೆಯೇ…?
10 ಇತ್ತೀಚಿನ ಸಮೀಕ್ಷೆಯ ಪ್ರಕಾರ ಜಗತ್ತಿನಲ್ಲಿ ಇಂಜಿನೀಯರ (ಅಭೀಯಂತರರು), ವೈದ್ಯರು ಹಾಗೂ ಎಮ್.ಬಿ.ಎ ವಿದ್ಯಾರ್ಥಿಗಳಲ್ಲಿ ಭಾರತೀಯ ವಿದ್ಯಾರ್ಥಿಗಳೇ ಅಧಿಕ ಹಾಗೂ ಅವರೇ ಮೇಲುಗೈ ಪಡೆದಿರುವುದು ನಿಮಗೆ ಗೊತ್ತಿದೆಯೇ…?
ನಮ್ಮ ಸರಳ ವಾಸ್ತುವಿನಂತೆ ನೋಡಿದಾಗ ಭಾರತ ದೇಶವು ವಾಸ್ತುವಿಗೆ ಅನುಗುಣವಾಗಿಯೇ ಇದೆ. ಸರಳ ವಾಸ್ತುವಿನ ಪ್ರಕಾರ ಯಾವುದೇ ಮನೆ/ಉದ್ಯೋಗ ಸ್ಥಳ, ಯಾವುದೇ ಊರು, ತಾಲ್ಲೂಕು, ಜಿಲ್ಲೆ, ರಾಜ್ಯ, ದೇಶ ಇವುಗಳ ಹಿಂದೆ ಪರ್ವತವಿದ್ದು ಮುಂದುಗಡೆಯಲ್ಲಿ ನೀರಿನ ಹರಿಯುವಿಕೆ ಇದ್ದರೆ ಆ ಮನೆ/ಉದ್ಯೋಗ ಸ್ಥಳ, ಊರು, ತಾಲ್ಲೂಕು, ಜಿಲ್ಲೆ, ರಾಜ್ಯ, ದೇಶ ಅಭಿವೃದ್ಧಿ ಹೊಂದಲೇಬೇಕು.
ದೇಶವನ್ನು ಆಳುವ ಸಂಸತ್ (ಪಾರ್ಲಿಮೆಂಟ್) ಭವನವು ದೆಹಲಿಯಲ್ಲಿ ಇರುವುದು. ಅದರ ಹಿಂದೆ ಹಿಮಾಲಯ ಪರ್ವತವು ಇರುವುದು. ಇನ್ನು ದಕ್ಷಿಣ ಭಾಗದಲ್ಲಿ ನೋಡಿದರೆ 3 ಕಡೆಗೂ ಸಮುದ್ರದ ನೀರು ಆವರಿಸಿದೆ. ಈ ರೀತಿಯಲ್ಲಿ ಜಗತ್ತಿನ ಯಾವುದೇ ದೇಶಕ್ಕೂ ಸಿಕ್ಕಿಲ್ಲ. ಇದು ಭಾರತ ದೇಶವು ಪಡೆದ ಭಾಗ್ಯ ಎನ್ನಬಹುದು. ಈಗಾಗಲೇ ಭಾರತವು ಅಭಿವೃದ್ಧಿಯ ಪಥದಲ್ಲಿ ದಾಪುಗಾಲಿಡುತ್ತಿರುವುದು ತಮ್ಮ ಅನುಭವಕ್ಕೆ ವೇದ್ಯವಾಗಿದೆ. ಬರುವ 2020 ರೊಳಗೆ ಜಾಗತೀಕವಾಗಿ ಭಾರತವು Super Power Country ಎನಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
ನಾನು ವಾಸ್ತು ಪಂಡಿತರಿಗೆ ಕೇಳಿಕೊಳ್ಳುವುದಿಷ್ಟೆ ವಿಷಯವನ್ನು ವಸ್ತು ನಿಷ್ಟವಾಗಿ ತಿಳಿದುಕೊಂಡು ತಾವುಗಳು ಪುಸ್ತಕಗಳಲ್ಲಿ ಬರೆಯುವುದು ಒಳ್ಳೆಯದು. ಅದನ್ನು ಬಿಟ್ಟು ತಮಗೆಷ್ಟು ತಿಳಿದಿದೆಯೋ ಅಷ್ಟನ್ನೇ ಬರೆದು ಜನತೆಯನ್ನು ತಪ್ಪು ದಾರಿಗೆಳೆದರೆ ಮುಂದೆ ಜನರೇ ತಮಗೆ ತಕ್ಕ ಉತ್ತರವನ್ನು ನೀಡುವರು. ವಾಸ್ತುವಿನ ವಿಷಯದಲ್ಲಿ ನೀವುಗಳು ಜನರನ್ನು ತಪ್ಪು ದಾರಿಗೆಳೆಯುವುದರಿಂದಲೇ ನಾನು ಮೊದಲ ಪುಟಗಳಲ್ಲಿ ಗೆರೆ ಹಾಕಿರುವುದು ಏಕೆ ಎನ್ನುವುದು ತಮಗೆ ತಿಳಿದಿರಬಹುದು.








