ಪ್ರಚಲಿತ ವಾಸ್ತುವಿನ ಪ್ರಕಾರ ಮನೆಯಲ್ಲಿಯ ಮೆಟ್ಟಿಲುಗಳು (ಸ್ಟೇರ್ ಕೇಸ್) ಮನೆಯ ಮಧ್ಯಭಾಗದಲ್ಲಿ ಇರಬಾರದು, ಮತ್ತು ಅದರ ಮೆಟ್ಟಿಲುಗಳು ಪೂರ್ವದಿಂದ ಪಶ್ಚಿಮದ ಕಡೆಗೆ ಮತ್ತು ಉತ್ತರದಿಂದ ದಕ್ಷಿಣದ ಕಡೆಗೆ ಇರಬೇಕು, ಈಶಾನ್ಯದಲ್ಲಿ ಇರಬಾರದು, ಇದ್ದರೆ ಅದನ್ನು ಒಡೆಯಬೇಕು. ಇದಲ್ಲದೇ ಮನೆಯ ಮುಖ್ಯ ದ್ವಾರದ ಎದುರಿಗೆ ಸ್ಟೇರ್ ಕೇಸ್ ಇರಬಾರದು, ಇದ್ದರೆ ಕೆಡುವಬೇಕೆಂದು ಪ್ರಚಲಿತ ವಾಸ್ತು ಪುಸ್ತಕಗಳಲ್ಲಿ ಬರೆದಿದೆ, ಮತ್ತು ಅನೇಕ ವಾಸ್ತು ಸಲಹೆಗಾರರು ಇದೇ ರೀತಿ ಸಲಹೆ ನೀಡುತ್ತಾರೆ.
ಸ್ಟೇರ್ ಕೇಸ್ಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೂ ತಾವು ಸ್ಟೇರ್ ಕೇಸ್ನ್ನು ಒಡೆಯುವ ಅವಶ್ಯಕತೆ ಇಲ್ಲ. ಈ ಸಮಸ್ಯಗೆ ಅದನ್ನು ಒಡೆಯಲಾರದೇ ಪರಿಹಾರವನ್ನು ಸರಳ ವಾಸ್ತುವಿನ ಮುಖಾಂತರ ತಾವು ಪಡೆಯಲು ಸಾಧ್ಯವಿದೆ. ಪ್ರಚಲಿತ ಕೆಲವು ವಾಸ್ತು ಪಂಡಿತರು ಮನೆಯ ಆವರಣದಲ್ಲಿದ್ದ ಗಿಡಮರಗಳನ್ನು ಕೆಲವೊಂದು ದಿಕ್ಕುಗಳಲ್ಲಿದ್ದರೆ, ಮನೆಯ ಮುಖ್ಯ ಬಾಗಿಲಿನ ಎದುರಿಗಿದ್ದರೆ, ಅವು ತಮಗೆ ಒಳ್ಳೆಯದಲ್ಲ. ಅದನ್ನು ಕಡಿದು ಹಾಕಬೇಕೆಂದು ಸಲಹೆ ನೀಡುತ್ತಾರೆ. ದಯವಿಟ್ಟು ಯಾರೂ ಈ ಕ್ರೂರ ಅಮಾನುಷ ಕಾರ್ಯವೆಸಗಿ ಪಾಪ ಕಟ್ಟಿಕೊಳ್ಳಬೇಡಿ.
ಅದೇ ಗಿಡಗಳು ನಮಗೆ ಹೂ, ಹಣ್ಣು, ಕಟ್ಟಿಗೆ ಕೊಡುತ್ತವೆ. ವಾತಾವರಣಗಳನ್ನು ಶುದ್ಧಿಗೊಳಿಸುತ್ತವೆ. ಇದಲ್ಲದೇ ಹೆಚ್ಚಿಗೆ ಮಳೆ ಬರಲು ಅನುಕೂಲ ಮಾಡಿಕೊಡುತ್ತವೆ. ಭೂಮಿಯ ಸುಂದರತೆಯನ್ನು ಹೆಚ್ಚಿಸುತ್ತವೆ. ನಮಗೆ ನೆರಳನ್ನು ಕೊಟ್ಟು ಮನೆಯನ್ನು ತಂಪಾಗಿರಿಸಲು ಸಹಾಯಕವಾಗುತ್ತವೆ. ಇಷ್ಟೆಲ್ಲ ಉಪಯುಕ್ತವಿರುವ ಗಿಡಗಳು ನಮ್ಮ ಒಳ್ಳೆಯ ಮಿತ್ರರಾಗಿರುವಾಗ ಅವನ್ನು ಕಲ್ಪವೃಕ್ಷ ಎಂದು ಕರೆದರೆ ತಪ್ಪೇನಿಲ್ಲ.









