ಪ್ರಚಲಿತ ವಾಸ್ತುವಿನ ಪುಸ್ತಕಗಳಲ್ಲಿ ಪ್ರತಿಯೊಬ್ಬರಿಗೂ ಉತ್ತರ ಅಥವಾ ಪೂರ್ವ ಕಡೆಗೆ ಇರುವ ನಿವೇಶನ, ಉತ್ತರ ಅಥವಾ ಪೂರ್ವಕ್ಕೆ ಮನೆಯ ಮುಖ್ಯ ದ್ವಾರ ಇದ್ದರೇನೇ ಶ್ರೇಷ್ಠ ಎಂದು ಜನರ ತಲೆಯಲ್ಲಿ ವಿಚಾರವನ್ನು ತುಂಬಿರುತ್ತಾರೆ. ಇದು ನಿಜವಾಗಿಯೂ ಎಷ್ಟೊಂದು ಸರಿ ಎಂದು ನಾವೆಲ್ಲರೂ ವಿಚಾರ ಮಾಡಬೇಕು. ಹಾಗೆಯೇ ದಕ್ಷಿಣ ಹಾಗೂ ಪಶ್ಚಿಮಕ್ಕೆ ಮನೆಯ ಮುಖ್ಯ ದ್ವಾರ ಇರುವ ಮನೆಯವರು ಯಾರೂ ಏಳಿಗೆಯನ್ನು ಕಂಡಿಲ್ಲವೇ? ಏಳಿಗೆಯನ್ನು ಕಂಡಿರುವ ಬಗ್ಗೆ ನಮ್ಮ ಬಳಿ ನೂರಾರು ಉದಾಹರಣೆಗಳಿವೆ. ನಾನೊಂದು ಪ್ರಶ್ನೆಯನ್ನು ಜನರ ಮುಂದಿಡಲು ಬಯಸುತ್ತೇನೆ. ಒಂದು ಮನೆಯಲ್ಲಿ ತಂದೆ ಸಾಕಷ್ಟು ಹೆಸರು ಮಾಡಿ ಹಣ ಗಳಿಸಿದ್ದಾಗ ಅದೇ ಮನೆಯಲ್ಲಿ ತಂದೆಯ ನಂತರ ಮಗ ಅಧಿಕಾರಕ್ಕೆ ಬಂದ್ದಿದಾಗ, ತಂದೆ ಎಷ್ಟೋ ಹಣ ಮಾಡಿ ಹೆಸರು ಮಾಡಿದ್ದರೂ, ಮಗನು ಹಣಕಾಸಿನಲ್ಲಿ ಹಾನಿಯಾಗಿ ಹೆಸರನ್ನು ಕೆಡಿಸಿಕೊಂಡಿರುವ ಸಾಕಷ್ಟು ಮನೆತನಗಳು ಪ್ರತಿಯೊಂದು ಊರಿನಲ್ಲೂ ಸಿಗುತ್ತದೆ. ತಂದೆಗೆ ಅನುಕೂಲವಾದ ಅದೇ ಮನೆ ಮಗ ಅಧಿಕಾರಕ್ಕೆ ಬಂದಾಗ ಈ ರೀತಿಯಾಗಲು ಕಾರಣವೇನು? ಈ ಪ್ರಶ್ನೆಗೆ ಯಾವ ವಾಸ್ತು ತಜ್ಞರಿಂದಾದರೂ ಉತ್ತರವಿದೆಯೇ?
ನಾನೊಮ್ಮೆ ಹುಬ್ಬಳ್ಳಿಯ ಚೇಂಬರ ಆಫ್ ಕಾಮರ್ಸ್ನಲ್ಲಿ ಉಪನ್ಯಾಸ ಕಾರ್ಯಕ್ರಮ ನೀಡುತ್ತಿರುವಾಗ ಸನ್ಮಾನ್ಯ ಶ್ರೀ ಮದನ ದೇಸಾಯಿಯವರು ಕಾರ್ಯಕ್ರಮಕ್ಕೆ ಅಥಿತಿಯಾಗಿ ಆಗಮಿಸಿದಾಗ ತಮ್ಮ ಪ್ರಶ್ನೆಯೊಂದನ್ನು ಎಲ್ಲ ಸಭಿಕರೆದುರು ನನ್ನ ಮುಂದಿಟ್ಟರು. ಮುಂಬಯಿಯಲ್ಲೊಂದು ಇಪ್ಪತ್ತೊಂದು ಅಂತಸ್ಥಿನ ಕಟ್ಟಡವಿದೆ. ಆ ಕಟ್ಟಡದ ಹದಿಮೂರನೇ ಅಂತಸ್ಥಿನಲ್ಲಿ ಹಾಗೂ ಹದಿನಾಲ್ಕನೇ ಅಂತಸ್ಥಿನಲ್ಲಿರುವವನ ಮನೆಯು ಎಲ್ಲಾ ರೀತಿಯಿಂದ ಪ್ರಚಲಿತ ವಾಸ್ತುವಿನ ಪ್ರಕಾರ ಉತ್ತರಕ್ಕೆ ಮನೆಯ ಮುಖ್ಯ ದ್ವಾರ, ಆಗ್ನೇಯಕ್ಕೆ ಅಡುಗೆ ಮನೆ, ಈಶಾನ್ಯದಲ್ಲಿ ದೇವರ ಮನೆ, ನೈರುತ್ಯದಲ್ಲಿ ಮನೆಯ ಯಜಮಾನನು ಮಲಗುವ ಕೋಣೆ, ಹೀಗೆ ಈ ವಾಸ್ತು ಪ್ರಕಾರವೇ ಇದೆ. ಹದಿಮೂರನೇ ಅಂತಸ್ಥಿನ ಮನೆಯಲ್ಲಿ ವಾಸ ಮಾಡುವವನಿಗೆ ಹಣವಿಡಲು ಜಾಗವಿಲ್ಲ, ಅಂದರೆ ಅವನು ಸಾಕಷ್ಟು ಶ್ರೀಮಂತ ವ್ಯಕ್ತಿ ಆದರೆ ಅದೆ ಕಟ್ಟಡದ ಹದಿನಾಲ್ಕನೆ ಅಂತಸ್ಥಿನಲ್ಲಿ ಇರುವವನ ಮನೆ ಹದಿಮೂರನೇ ಅಂತಸ್ಥಿನ ವಾಸ್ತುವಿನ ರೀತಿಯಲ್ಲಿಯೇ ಇದೆ. ಆದರೂ ಹದಿನಾಲ್ಕನೇ ಅಂತಸ್ಥಿನಲ್ಲಿರುವ ವ್ಯಕ್ತಿ ಸಾಕಷ್ಟು ಸಾಲ ಮಾಡಿದ್ದಾನೆ ಹಾಗೂ ಎಲ್ಲ ರೀತಿಯ ತೊಂದರೆಯಿಂದ ಬಳಲುತ್ತಿದ್ದಾನೆ, ಹೀಗೇಕೆ ಎಂದು ನನ್ನನ್ನು ಪ್ರಶ್ನಿಸಿದರು.
ಆಗ ನಾನು ಅವರಿಗೆ ಉತ್ತರಿಸುತ್ತ ಮೊದಲು ಉತ್ತರ ಹಾಗೂ ಪೂರ್ವ ಎಲ್ಲರಿಗೂ ಶ್ರೇಷ್ಠ ಎಂದು ತಿಳಿಯಬೇಡಿರಿ. ಅವರವರ ಹುಟ್ಟಿದ ತಾರೀಖಿನ ಮೇರೆಗೆ ಪ್ರತಿಯೊಬ್ಬನಿಗೂ ಒಳ್ಳೆಯ ದಿಕ್ಕು ಹಾಗೂ ಕೆಟ್ಟ ದಿಕ್ಕುಗಳು ಇರುತ್ತವೆ. ಅವರಿಗೆ ಉತ್ತರ ಹಾಗೂ ಪೂರ್ವ ಒಳ್ಳೆಯ ದಿಕ್ಕಿನಲ್ಲಿದ್ದರೆ ಅವರ ಮನೆಯಿಂದ ಏಳಿಗೆ ಕಾಣಲು ಸಹಾಯಕವಾಗುತ್ತದೆ. ಅದೇ ಪೂರ್ವ ಮತ್ತು ಉತ್ತರ ಅವರ ಪಾಲಿಗೆ ಕೆಟ್ಟ ದಿಕ್ಕುಗಳಾಗಿದ್ದರೆ ಅವರು ಎಲ್ಲವನ್ನು ಅದೇ ಮನೆಯಲ್ಲಿ ಕಳೆದುಕೊಳ್ಳುತ್ತಾರೆ ಎಂದು ತಿಳಿಸಿ ಅವರಿಗೆ ಒಂದೇ ಮನೆಯಲ್ಲಿರುವ ತಂದೆ ಮಗನ ಉದಾಹರಣೆಯನ್ನು ಕೊಟ್ಟೆ. ಅವರಿಗೆ ನನ್ನ ಉತ್ತರ ನೈಜ ಎನಿಸಿತು. ಇನ್ನು ಮುಂದೆಯಾದರೂ ಎಲ್ಲರಿಗೂ ಪೂರ್ವ ಹಾಗೂ ಉತ್ತರ ದಿಕ್ಕುಗಳೇ ಶ್ರೇಷ್ಠ, ದಕ್ಷಿಣ ಹಾಗೂ ಪಶ್ಚಿಮ ದಿಕ್ಕುಗಳು ಶ್ರೇಷ್ಠವಲ್ಲ ಎನ್ನುವುದು ಬೇಡ. ಇವು ಅವರವರ ಜನ್ಮ ದಿನಾಂಕದ ಮೇಲೆ ನಿರ್ಧರಿತವಾಗುತ್ತದೆ. ಅದೇ ಪ್ರಕಾರ ಅವರು ಮನೆಯಲ್ಲಿ ವಾಸಿಸಿದಾಗ ಅವರು ಸಾಕಷ್ಟು ಅಭಿವೃದ್ಧಿ ಹೊಂದಲು ಸಹಾಯಕವಾಗುವುದು.
ಇದಕ್ಕೆ ಇನ್ನೂ ಒಂದು ಉದಾಹರಣ ಎಂದರೆ ಶ್ರೀ ಎಮ್.ಪಿ.ಶಂಕರ ನಟ, ನಿರ್ಮಾಪಕ ಮೈಸೂರು ಇವರದು. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ, ಸಿನಿಮಾಗಳನ್ನು ನಿರ್ಮಿಸಿರುವ ಇವರ ಬಗ್ಗೆ ಯಾರಿಗೂ ಪರಿಚಯಿಸುವ ಅಗತ್ಯವಿಲ್ಲ. ನಾನೊಮ್ಮೆ ಮೈಸೂರಿನ ರೋಟರಿ ಕ್ಲಬ್ನಲ್ಲಿ ಉಪನ್ಯಾಸ ಕಾರ್ಯಕ್ರಮ ನೀಡಲು ಹೋದಾಗ ನನ್ನ ಆತ್ಮೀಯರಾದ ಶ್ರೀ ಕುಲಕರ್ಣಿಯವರ ಮೂಲಕ ಶ್ರೀ ಎಮ್.ಪಿ.ಶಂಕರ ರವರ ಪರಿಚಯವಾಯಿತು. ಅಲ್ಲಿ ವಾಸ್ತುವಿನ ವಿಷಯದ ಬಗ್ಗೆ ಚರ್ಚೆ ಶುರುವಾಯಿತು. ಅವರು ಒಂದೇ ಮಾತನ್ನು ಹೇಳಿದರು. ದಯವಿಟ್ಟು ವಾಸ್ತುವಿನ ಬಗ್ಗೆ ಏನೂ ಮಾತನಾಡಬೇಡಿರಿ. ನಾನು ಏಕೆ…? ಎಂದು ಕೇಳಿದೆ. ಆಗ ಅವರು ಕೊಟ್ಟ ಉತ್ತರ ನಾನು ನನ್ನ ಹಿಂದಿನ ಮನೆಗೆ ಕರ್ನಾಟಕದಲ್ಲಿ ವಾಸ್ತುವಿನ ಬಗ್ಗೆ ಸಾಕಷ್ಟು ಪುಸ್ತಕಗಳನ್ನು ಬರೆದ ವಾಸ್ತು ಪಂಡಿತನಿಂದ ಪ್ರತಿಯೊಂದು ಸಲಹೆಯನ್ನು ಪಡೆದು ಮನೆಯನ್ನು ಕಟ್ಟಿಸಿದೆ. ಅಂದರೆ ಉತ್ತರದಲ್ಲಿ ಮನೆಯ ಮುಖ್ಯ ದ್ವಾರ, ಈಶಾನ್ಯದಲ್ಲಿ ದೇವರ ಮನೆ, ಆಗ್ನೇಯದಲ್ಲಿ ಅಡುಗೆ ಮನೆ, ನೈರುತ್ಯದಲ್ಲಿ ಮನೆಯ ಯಜಮಾನನ ಮಲಗುವ ಕೋಣೆ, ಹೀಗೆ ಅವರು ಹೇಳಿದ ಪ್ರಕಾರವೇ ಮನೆ ಕಟ್ಟಿಸಿದೆ. ಆದರೆ ಮುಂದೆ ಆಗಿದ್ದೇನು? ಆ ಮನೆಯಿಂದ ಸಾಕಷ್ಟು ತೊಂದರೆ ಅನುಭವಿಸಿ ಕೊನೆಗೆ ಆ ಮನೆಯನ್ನು ಮಾರಿ ಈಗ ಬೇರೊಂದು ಮನೆಯನ್ನು ಕಟ್ಟಸಿಕೊಂಡು ವಾಸ ಮಾಡುತ್ತಿದ್ದೇನೆ. ಮಾರಿದ ಆ ಮನೆಯ ಬಗ್ಗೆ ಇಂದಿಗೂ ಮೈಸೂರಿನ ಜನತೆ ಹೇಳುತ್ತೀರುತ್ತಾರೆ, ಮೈಸೂರಿನ ಅರಮನೆಯ ನಂತರದ ಮನೆಯೆಂದರೆ ಇವರದೇ ಮನೆ ಎಂದು. ಆದರೆ ಇಂತಹ ಮನೆಯನ್ನು ನನ್ನ ಕೈಯಲ್ಲಿ ಉಳಿಸಿಕೊಳ್ಳಲಾಗಲಿಲ್ಲ ಎಂದು ಹೇಳಿ “ವಾಸ್ತು ಎಂದರೆ ನನಗೆ ಅಲರ್ಜಿ ಏಕೆಂದರೆ ಇದೇ ವಾಸ್ತುವನ್ನು ನಂಬಿ ನಾನು ಎಲ್ಲವನ್ನು ಕಳೆದುಕೊಂಡಿದ್ದೇನೆ” ಎಂದು ಹೇಳಿದರು. ಆಗ ನಾನು ಅವರಿಗೆ ನಮ್ಮ ಸರಳ ವಾಸ್ತುವಿನ ಬಗ್ಗೆ ವಿವರವಾಗಿ ಹೇಳಿದೆ, ಅಲ್ಲದೇ ಇದರಲ್ಲಿ ನಾವು ಏನನ್ನೂ ಒಡೆಯಲು ಹೇಳುವುದಿಲ್ಲ ಎಂದಾಗ ಅವರು ವಾಸ್ತುವನ್ನು ಅಳವಡಿಸಿಕೊಳ್ಳಲು ಒಪ್ಪಿಕೊಂಡರು. ನಂತರ ಅವರಿಗೆ ಸಲಹೆಯನ್ನು ನೀಡಿದೆವು. ಹಾಗಾದರೆ ಅವರ ಮೊದಲ ಮನೆಯಲ್ಲಿ ದೋಷ ಏನಿತ್ತು? ಕಾರಣವಿಷ್ಟೆ, ನಾನು ಮೊದಲು ತಿಳಿಸಿರುವಂತೆ ಪ್ರತಿಯೋರ್ವ ವ್ಯಕ್ತಿಗೂ ನಾಲ್ಕು ಒಳ್ಳೆಯ ದಿಕ್ಕುಗಳು ಹಾಗೂ ನಾಲ್ಕು ಕೆಟ್ಟ ದಿಕ್ಕುಗಳು ಇರುತ್ತಿದ್ದು ಆ ಪ್ರಕಾರವೇ ನಾವು ಹೋಗಬೇಕಾಗುತ್ತದೆ. ಸತ್ಯವೆಂದರೆ ಎಲ್ಲರಿಗೂ ಉತ್ತರ ಹಾಗೂ ಪೂರ್ವ ದಿಕ್ಕುಗಳು ಒಳ್ಳೆಯದ್ದೂ ಅಂದೇನೂ ಅಲ್ಲ. ಹಾಗೆಯೇ ಶ್ರೀ ಎಮ್.ಪಿ.ಶಂಕರ ರವರ ಜನ್ಮ ದಿನಾಂಕದ ಮೇಲೆ ನೋಡಿದಾಗ ಉತ್ತರ ಎಂದರೆ ಅವರಿಗೆ ಬರುವ ನಾಲ್ಕು ಕೆಟ್ಟ ದಿಕ್ಕುಗಳಲ್ಲಿ ಅತೀ ಕೆಟ್ಟ ದಿಕ್ಕು. ಅತೀ ಕೆಟ್ಟ ದಿಕ್ಕಿನಲ್ಲಿ ಮನೆಯ ಮುಖ್ಯ ದ್ವಾರ ಬಂದಾಗ ಈ ರೀತಿಯಾಗಿ ಆಗುವುದರಲ್ಲಿ ಸಂಶಯವೇ ಇಲ್ಲ.
ಈ ಉದಾಹರಣೆಯನ್ನು ತಮ್ಮ ಮುಂದಿಡಲು ಕಾರಣವೇನೆಂದರೆ ಶ್ರೀಯುತರು ಕರ್ನಾಟಕದಲ್ಲಿ ಪ್ರತಿಯೋರ್ವರಿಗೂ ಪರಿಚಿತ ವ್ಯಕ್ತಿ. ಹೆಸರಿನಲ್ಲಿ ಕಟ್ಟಡ ಒಡೆದು ಬದಲಾವಣೆ ಮಾಡಿ ಲಕ್ಷಗಟ್ಟಲೇ ಹಣ ಕಳೆದುಕೊಳ್ಳುವುದು ನಿಲ್ಲಬೇಕು ಎನ್ನುವುದೇ ನಮ್ಮ ಹಾಗೂ ಅವರ ಅಭಿಲಾಷೆ. ಹಿಂದೆ ನಾನು ಮತ್ತೊಮ್ಮೆ ಉಪನ್ಯಾಸ ಕಾರ್ಯಕ್ರಮ ಕೊಡಲು ಹೋದಾಗ ಅವರ ಜೊತೆಯಲ್ಲಿ ಫೋನಿನ ಮುಖಾಂತರ ಯೋಗಕ್ಷೇಮ ವಿಚಾರಿಸಿದೆ. ಆಗ ಅವರು ನಾನು ಸಾಕಷ್ಟು ಬದಲಾವಣೆಯನ್ನು ಕಂಡಿದ್ದೇನೆ ಈಗ ಶಾಂತಿ, ಸಮಾಧಾನ, ನೆಮ್ಮದಿಯಿಂದ ಬಾಳುತಿದ್ದೇನೆ ಎಂದು ತಿಳಿಸಿ ಮನೆಗೆ ಕರೆಯಿಸಿಕೊಂಡು ಸಿಹಿ ತಿನಿಸಿ ಕಳುಹಿಸಿಕೊಟ್ಟರು.








